ರಾಮನಗರ: ಮನೆಯಲ್ಲಿದ್ದ ಗ್ಯಾಸ್ ಗೀಸರ್ (Gas Geyser) ವಿಷಕಾರಿ ಕಾರ್ಬನ್ ಮಾನಾಕ್ಸೈಡ್ (Carbon Monoxide) ಸೋರಿಕೆಯಿಂದಾಗಿ ತಾಯಿ ಮತ್ತು ಮಗ ಸಾವನ್ನಪ್ಪಿರುವ ಘಟನೆ ಮಾಗಡಿ (Magadi) ಪಟ್ಟಣದ ಜ್ಯೂರಿನಗರದಲ್ಲಿ ನಡೆದಿದೆ.
ಈ ಘಟನೆ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಾಯಿ ಶೋಭಾ(40) ಮತ್ತು ಪುತ್ರ ದಿಲೀಪ್ (17) ಸಾವನ್ನಪ್ಪಿದ ದುರ್ದೈವಿಗಳು.ಭಾನುವಾರ ಸಂಜೆ ವೇಳೆ ದಿಲೀಪ್ ಸ್ನಾನದ ಕೊಠಡಿಯಲ್ಲಿರುವ ಗೀಸರ್ ಸ್ವಿಚ್ ಆನ್ ಮಾಡಿಕೊಂಡಿದ್ದಾನೆ.
ಈ ವೇಳೆ ಗೀಸರ್ ನಲ್ಲಿ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿದೆ. ಸ್ನಾನದ ಮನೆಗೆ ಕಿಟಕಿ ಇಲ್ಲದ ಹಿನ್ನೆಲೆಯಲ್ಲಿ ಕೊಠಡಿಯಲ್ಲಿ ವಿಷಾನಿಲ ಆವರಿಸಿ ದಿಲೀಪ್ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಇತ್ತ ಸ್ನಾನಕ್ಕೆ ಹೋದ ಮಗ ಇಷ್ಟು ಹೊತ್ತಾದರೂ ಬರಲಿಲ್ಲ ಎಂದು ತಾಯಿ ಶೋಭಾ, ಸ್ನಾನದ ಕೊಠಡಿ ಬಾಗಿಲು ತೆರೆದು ನೋಡಿದಾಗ ಅವರು ಕೂಡ ಅಸ್ವಸ್ಥರಾಗಿದ್ದಾರೆ.
ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದಾರೆ. ಆದರೆ, ಅಷ್ಟೊತ್ತಿಗೆ ಮಗನೊಂದಿಗೆ ತಾಯಿ ಕೂಡ ಸಾವನ್ನಪ್ಪಿದ್ದಾರೆ. ವಿಷಯ ತಿಳಿದ ಮಾಗಡಿ ಪೊಲೀಸರು, ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






