ಬೆಂಗಳೂರು: ಹಣಕ್ಕಾಗಿ ತಾಯಿ ಹಾಗೂ ಮಗನನ್ನ ಕಿಡ್ನ್ಯಾಪ್ ಮಾಡಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು 9 ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಇಬ್ಬರು ರೌಡಿಶೀಟರ್ (Rowdy Sheeter Gang) ಸೇರಿದಂತೆ ಒಟ್ಟು 9 ಜನ ಅರೆಸ್ಟ್ ಆಗಿದ್ದಾರೆ. ಚಂದ್ರ ಲೇಔಟ್ ಪೊಲೀಸರು (Chandra Layout Police) ಆರೋಪಿಗಳನ್ನು ಬಂಧಿಸಿದ್ದಾರೆ. ಜೋಸೆಫ್ (ರೌಡಿ ಶೀಟರ್), ಶ್ರೀನಿವಾಸ್ @ ಪಾಗಲ್ ಸೀನ (ರೌಡಿಶೀಟರ್), ಸೌಮ್ಯಾ, ಪ್ರತಾಪ್, ಜತಿನ್, ವಿಘ್ನೇಶ್, ಸೈಯದ್ ಶಹಬುದ್ದೀನ್, ಸ್ವಾತಿ, ಮಾದೇಶ ಬಂಧಿತ ಆರೋಪಿಗಳು ಎನ್ನಲಾಗಿದೆ. ಆ.13 ರಂದು ಆರೋಪಿಗಳಾಗಿರುವ ಜೋಸೆಫ್ ಮತ್ತು ಶ್ರೀನಿವಾಸ್ ಹಣ ವಸೂಲಿ ಮಾಡಲು ತಾಯಿ-ಮಗನನ್ನ ಕಿಡ್ನ್ಯಾಪ್ (Kidnap) ಮಾಡಿದ್ದರು. ನಂತರ ಇಬ್ಬರನ್ನೂ ಪರಿಚಯಸ್ಥ ಪ್ರತಾಪ್ ಮನೆಯಲ್ಲಿ ಅಕ್ರಮವಾಗಿ ಇರಿಸಿ ಟಾರ್ಚರ್ ನೀಡಿದ್ದಾರೆ ಎನ್ನಲಾಗಿದೆ.
ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ಎಸಗಿ 2 ಲಕ್ಷ ರೂ. ಕೊಡುವಂತೆ ಕಿರುಕುಳ ನೀಡಿದ್ದಾರೆ. ಆನಂತರ ಇಬ್ಬರ ಹತ್ತಿರ ಹಣ ಇಲ್ಲ ಎನ್ನುವುದು ತಿಳಿಯುತ್ತಿದ್ದಂತೆ ಬಿಟ್ಟು ಕಳುಹಿಸಿದ್ದಾರೆ. ಆಗ ಆ ಗ್ಯಾಂಗ್ ನಿಂದ ತಪ್ಪಿಸಿಕೊಂಡ ಮಹಿಳೆ ಚಂದ್ರಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಇಬ್ಬರು ರೌಡಿಶೀಟರ್ಗಳು, ಇಬ್ಬರು ಮಹಿಳೆಯರು ಸೇರಿದಂತೆ 9 ಜನರನ್ನು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.
ಜೋಸೆಫ್ ಮತ್ತು ಪಾಗಲ್ ಸೀನ ಚಂದ್ರಾ ಲೇಔಟ್ ರೌಡಿ ಶೀಟರ್ ಗಳಾಗಿದ್ದು, ಶಹಬುದ್ದೀನ್ ಮತ್ತು ವಿಘ್ನೇಶ್ ವಿರುದ್ಧ ಈ ಹಿಂದೆ ಹಲ್ಲೆ ಪ್ರಕರಣಗಳಿವೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.








