ನವದೆಹಲಿ : ತನ್ನ ವಿಸ್ತರಣಾ ವಾದದಿಂದಲೇ ಅನೇಕ ರಾಷ್ಟ್ರಗಳೊಡನೆ ಯುದ್ಧಕ್ಕೆ ಇಳಿಯುವ ಚೀನಾ ಅನೇಕ ಬಾರಿ ಮುಖಭಂಗ ಅನುಭವಿಸಿದೆ. 2016ರಲ್ಲಿ ಡೋಕ್ಲಾಂ ವಿಚಾರವಾಗಿ ಭಾರತದೊಂದಿಗೆ ಸಂಘರ್ಷಕ್ಕೆ ಇಳಿದಿದ್ದ ಚೀನಾ ಅತೀ ದೊಡ್ಡ ರಾಜತಾಂತ್ರಿಕ ಸೋಲನ್ನು ಅನುಭವಿಸಬೇಕಾಯ್ತು. ಇಷ್ಟೆಲ್ಲಾ ಯುದ್ಧ ಸಂಘರ್ಷಗಳು ನಡೆದರೂ ಚೀನಾ ತನ್ನ ಹಳೆಯ ಚಾಳಿಯನ್ನು ಬಿಟ್ಟಿಲ್ಲ. ಈಗ ಸ್ವಾಯತ್ತ ಟಿಬೆಟ್ ಪ್ರದೇಶಕ್ಕೆ ಒಳಪಡುವ ಜಗತ್ತಿನ ಅತೀ ದೊಡ್ಡ ಪರ್ವತ ಶ್ರೇಣಿ ಮೌಂಟ್ ಎವೆರೆಸ್ಟ್ ನನ್ನದು ಎಂದು ಚೀನಾ ಬಾಯಿ ಬಡಿದುಕೊಳ್ಳುತ್ತಿದೆ.
ಬೀಜಿಂಗ್ ಸರ್ಕಾರದ ಮುಖವಾಣಿಯಾಗಿರುವ ಸಿಜಿಟಿಎನ್ (ಚೀನಾ ಗ್ಲೋಬಲ್ ಟೆಲಿವಿಸನ್ ನೆಟ್ ವರ್ಕ್) ಮೌಂಟ್ ಎವರೆಸ್ಟ್ ಚೀನಾದಲ್ಲಿದೆ ಎನ್ನುವ ರೀತಿ ಟ್ವೀಟ್ ಮಾಡಿದೆ. ಮೌಂಟ್ ಎವರೆಸ್ಟ್ ನ ಫೋಟೋಗಳನ್ನು ಪೋಸ್ಟ್ ಮಾಡಿರುವ ಸಿಜಿಟಿಎನ್ ಚೀನಾ ಸ್ವಾಯುತ್ತ ಟಿಬೆಟ್ ನಲ್ಲಿರುವ ಮೌಂಟ್ ಎವರೆಸ್ಟ್ ನಲ್ಲಿ ಸೂರ್ಯೋದಯದ ವಿಹಂಗಮ ನೋಟ ಎಂದು ಬರೆದುಕೊಂಡಿದೆ.
ಸದ್ಯ, ಚೀನಾದ ಈ ನಡೆಯ ವಿರುದ್ಧ ಭಾರತೀಯ ಹಾಗೂ ನೇಪಾಳದ ಜನ ತಿರುಗಿ ಬಿದ್ದಿದ್ದಾರೆ. #BackoffChina ಅನ್ನೋ ಹ್ಯಾಶ್ ಟ್ಯಾಗ್ ನ ಸದ್ಯ ಟ್ರೆಂಡಿಂಗ್ ಮಾಡುತ್ತಿದ್ದಾರೆ. ಚೀನಾ ಸುಳ್ಳು ಸುದ್ದಿಯನ್ನು ಹರಿಬಿಡುವುದನ್ನು ನಿಲ್ಲಿಸು, ಮೌಂಟ್ ಎವರೆಸ್ಟ್ ಇರೋದು ನೇಪಾಳದಲ್ಲಿ.. ಚೀನಾದಲ್ಲಿ ಅಲ್ಲ ಅಂತ ನೇಪಾಳಿಗರು ಚೀನಾ ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಚೀನಾ-ನೇಪಾಳ ನಡುವೆ ಗಡಿ ಒಪ್ಪಂದ
1960ರಲ್ಲಿ ಚೀನಾ-ನೇಪಾಳ ನಡುವೆ ಗಡಿ ಒಪ್ಪಂದವಾಗಿದ್ದು, ಅದರನ್ವಯ ಮೌಂಟ್ ಎವರೆಸ್ಟ್ ನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಉತ್ತರದ 4 ಸಾವಿರದ 572 ಮೀಟರ್ ಪ್ರದೇಶವನ್ನು ಸ್ವಾಯತ್ತ ಟಿಬೆಟ್ ಗೆ ಸೇರಿಸಲಾಗಿದೆ. ಇನ್ನುಳಿದ ಭಾಗವನ್ನು ನೇಪಾಳಕ್ಕೆ ನೀಡಲಾಗಿದೆ. ಉತ್ತರದ ಸ್ವಾಯತ್ತ ಟೆಬೆಟ್ ಪ್ರದೇಶದಲ್ಲಿ ಮೌಂಟ್ ಎವರೆಸ್ಟ್ ಇದ್ದು, ಅದನ್ನು ಈಗ ಚೀನಾ ತನ್ನದು ಎಂದು ಹೇಳಿಕೊಳ್ತಿದೆ.








