ವಿಡಿಯೋ ಕಾನ್ಫರೆನ್ಸ್ ಮಾಡಿದ್ರೆ ಸಾಲದು, ಫೀಲ್ಡಿಗಿಳೀಬೇಕು : ರೋಹಿಣಿ ಸಿಂಧೂರಿ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ
ಮೈಸೂರು : ಪ್ರತಿದಿನ ಸಂಜೆ ವಿಡಿಯೋ ಕಾನ್ಫರೆನ್ಸ್ ಮಾಡಿಕೊಂಡು ಕೋವಿಡ್ ಅಂಕಿ ಅಂಶಗಳನ್ನು ತೆಗೆದುಕೊಂಡರೆ ಪರಿಸ್ಥಿತಿ ಸುಧಾರಣೆ ಆಗುವುದಿಲ್ಲ. ಖುದ್ದಾಗಿ ಜಿಲ್ಲಾಧಿಕಾರಿಗಳು ಹಾಗು ಆರೋಗ್ಯಾಧಿಕಾರಿಗಳು ಫೀಲ್ಡ್ ಗೆ ಇಳಿಯಬೇಕು ಎಂದು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್ಸಿಂಹ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರಾರರೊಂದಿಗೆ ಮಾತನಾಡಿದ ಅವರು, ಪ್ರತಿನಿತ್ಯ ಗ್ರಾಮಾಂತರ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ತಾಲೂಕು ಕೇಂದ್ರಗಳಲ್ಲಿ 50 ರಿಂದ 60 ಸಾವಿನ ಪ್ರಕರಣಗಳು ಕಂಡುಬರುತ್ತಿವೆ. ಈ ಹಿನ್ನೆಲೆ ಉಸ್ತುವಾರಿ ಸಚಿವರು ಜಿಲ್ಲೆಯ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಜಿಲ್ಲಾಡಳಿತ ಪ್ರತಿದಿನ ಸಂಜೆ ಕಚೇರಿಯಲ್ಲಿ ಕುಳಿತುಕೊಂಡು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋವಿಡ್ ನ ಅಂಕಿ ಅಂಶಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಇದರಿಂದ ಪರಿಸ್ಥಿತಿ ಸುಧಾರಣೆಯಾಗುವುದಿಲ್ಲ. ಫೀಲ್ಡ್ ಗೆ ಇಳಿದು ಕೆಲಸ ಮಾಡಬೇಕು. ಖುದ್ದಾಗಿ ಜಿಲ್ಲಾಧಿಕಾರಿಗಳು, ಡಿ.ಹೆಚ್.ಒ ಹಾಗೂ ಜಿಲ್ಲಾ ಪಂಚಾಯತ್ ಸಿ.ಇ.ಒ ಗಳು ಫೀಲ್ಡ್ ಗೆ ಇಳಿಯಬೇಕು. ಗ್ರಾಮಾಂತರ ಭಾಗದ ಸ್ಥಿತಿಗತಿ ಪರಿಶೀಲನೆ ಮಾಡಬೇಕು. ಅಲ್ಲಿನ ಕೋವಿಡ್ ಕೇರ್ ಸೆಂಟರ್ ಗಳಿಗೆ ಭೇಟಿ ನೀಡಬೇಕು. ಆಗ ಮಾತ್ರ ಅಲ್ಲಿನ ವ್ಯವಸ್ಥೆ ಮತ್ತು ಅವ್ಯವಸ್ಥೆಯನ್ನು ಕಾಣಬಹುದು ಎಂದರು.
ಇನ್ನು ವಿಡಿಯೋ ಕಾನ್ಫರೆನ್ಸ್ ಮಾಡುವುದು. ಅಧಿಕಾರಿಗಳು ಪಟ್ಟಿಕೊಡುವುದು. ಆ ಲಿಸ್ಟ್ ನ್ನು ಮೀಡಿಯಾಕ್ಕೆ ಬಿಡುಗಡೆ ಮಾಡುವುದರಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ. ರಾಜಕಾರಣಿಗಳು ನಮ್ಮ ಕೆಲಸವನ್ನು ಮಾಡುತ್ತೇವೆ. ಆದರೆ ಉನ್ನತಮಟ್ಟದ ಅಧಿಕಾರಿಗಳು ಬಹಳ ಗಂಭೀರವಾಗಿ ಕೆಲಸ ತೆಗೆದುಕೊಂಡು ಮಾಡಿದರೆ ಮಾತ್ರ ಪರಿಸ್ಥಿತಿ ನಿಭಾಹಿಸಲು ಸಾಧ್ಯ ಎಂದರು.









