ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಬದುಕಿಗೆ ವಿದಾಯ..!
ಕ್ರಿಕೆಟ್ ಬದುಕಿಗೆ ಮಹೇಂದ್ರ ಸಿಂಗ್ ಧೋನಿ ವಿದಾಯ.. ಹಾಗಂತ ಮಿಸ್ ಯೂ ಧೋನಿ ಅನ್ನೊಲ್ಲ. ಯಾಕಂದ್ರೆ ಧೋನಿಯನ್ನು ಯಾವತ್ತೂ ಮಿಸ್ ಮಾಡೋಕೆ ಆಗಲ್ಲ. ಧೋನಿಯ ಹೆಸರು ವಿಶ್ವ ಕ್ರಿಕೆಟ್ ನಲ್ಲಿ ಸದಾ ರಾರಾಜಿಸುತ್ತಲೇ ಇರುತ್ತೆ. ಯಾಕಂದ್ರೆ ಒಂದು ತಂಡದ ನಾಯಕ ಹೇಗಿರಬೇಕು ಅಂದಾಗ ಧೋನಿಯ ಹೆಸರು ಕೇಳಿಬರುತ್ತೆ.. ತಂಡವನ್ನು ಗೆಲ್ಲಿಸುವಂತಹ ಮ್ಯಾಚ್ ವಿನ್ನರ್ ಹೇಗಿರಬೇಕು ಅಂದಾಗ ಧೋನಿ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತೆ. ಹಿರಿಯ ಆಟಗಾರನಾಗಿ ಕಿರಿಯ ಆಟಗಾರರಿಗೆ ಸ್ಪೂರ್ತಿ ಹೇಗೆ ನೀಡಬೇಕು ಅಂದಾಗ ಧೋನಿ ಹೆಸರನ್ನು ಮಾದರಿಯನ್ನಾಗಿಸುತ್ತಾರೆ. ಅಂದ ಮೇಲೆ ಧೋನಿಯನ್ನು ಮಿಸ್ ಮಾಡೋದು ಹೇಗೆ ಸಾಧ್ಯ.

ಹೌದು, ಧೋನಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳುತ್ತಾರೆ ಅಂತ ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದ್ರೆ ಇನ್‍ಸ್ಟಾಗ್ರಾಂನಲ್ಲಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳುತ್ತಾರೆ ಅಂತ ಯಾರು ಅಂದುಕೊಂಡಿರಲಿಲ್ಲ. ಹಾಗೇ ನೋಡಿದ್ರೆ ಕಳೆದ ವಿಶ್ವಕಪ್ ವೇಳೆಯಲ್ಲೇ ಧೋನಿ ವಿದಾಯ ಹೇಳುತ್ತಾರೆ ಅಂತ ಹೇಳಲಾಗುತ್ತಿತ್ತು. ಆದ್ರೆ ಸೆಮಿಫೈನಲ್ ಸೋಲು ಧೋನಿಯನ್ನು ಕೊಂಚ ಮಟ್ಟಿಗೆ ಘಾಸಿ ಗೊಳಿಸಿದ್ದಂತೂ ಸುಳ್ಳಲ್ಲ. ಹೀಗಾಗಿ ಅವರು ಕಳೆದ ಒಂದು ವರ್ಷದಿಂದ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಈ ನಡುವೆ ಧೋನಿ ಯಾವಾಗ ವಿದಾಯ ಹೇಳ್ತಾರೆ ಅನ್ನೋದರ ಬಗ್ಗೆಯೇ ಚರ್ಚೆ ನಡೆಯುತ್ತಿತ್ತು.
‘
ಇದೀಗ ಧೋನಿ ಎಲ್ಲಾ ಪ್ರಶ್ನೆಗಳಿಗೆ ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಉತ್ತರ ನೀಡಿದ್ದಾರೆ. ನಿಮ್ಮ ಪ್ರೀತಿಗೆ ತುಂಬಾನೇ ಧನ್ಯವಾದಗಳು. 1929 ಗಂಟೆಯಿಂದ ನನ್ನನ್ನು ನಿವೃತ್ತ ಎಂದು ಪರಿಗಣಿಸಿ ಅಂತ ಧೋನಿ ಇನ್‍ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ಇದೀಗ ಧೋನಿ ಐಪಿಎಲ್ ಟೂರ್ನಿಯತ್ತ ಗಮನ ಹರಿಸಿದ್ದಾರೆ. ಇಂದಿನಿಂದ ಚೆನ್ನೈನಲ್ಲಿ ಸಿಎಸ್‍ಕೆ ತಂಡದ ತರಬೇತಿ ಶಿಬಿರ ನಡೆಯುತ್ತಿದೆ. ಆಗಸ್ಟ್ 21ರಂದು ಸಿಎಸ್‍ಕೆ ತಂಡ ಯುಎಇಗೆ ಪ್ರಯಾಣ ಬೆಳೆಸಲಿದೆ.








