ಎಂ.ಎಸ್.ಧೋನಿ ಗುಡ್ ಬೈ.. ಜಡೇಜಾಗೆ ಸಿಎಸ್ ಕೆ ಕ್ಯಾಪ್ಟನ್ ಪಟ್ಟ
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅತ್ಯಂತ ಯಶಸ್ವಿ ತಂಡ.
ಟೀಂ ಇಂಡಿಯಾದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅದ್ಭುತ ಯಶಸ್ಸನ್ನು ಸಾಧಿಸಿದೆ.
2010, 2011, 2018, 2021 ರ ಋತುಗಳಲ್ಲಿ ಸಿಎಸ್ ಕೆ ಚಾಂಪಿಯನ್ ಆಗಿದೆ.
ಇದೆಲ್ಲ ಸಾಧ್ಯವಾಗಿದ್ದು ಧೋನಿ ನಾಯಕತ್ವದಿಂದಲೇ ಎಂದರೆ ಅತಿಶಯೋಕ್ತಿಯಲ್ಲ.
ವಾಸ್ತವವಾಗಿ, ಅಭಿಮಾನಿಗಳು ಧೋನಿ ಮತ್ತು ಸಿಎಸ್‌ಕೆಯನ್ನು ಬೇರೆ ಬೇರೆಯಾಗಿ ನೋಡಲು ಬಯಸುವುದಿಲ್ಲ.
ಆದ್ರೆ ಸದ್ಯದ ಕ್ರೀಡಾವಲಯದಲ್ಲಿ ಹರಿದಾಡುತ್ತಿರುವ ಸುದ್ದಿ ಏನಂದರೇ ಎಂ.ಎಸ್.ಧೋನಿ ಸಿಎಸ್ ಕೆ ತಂಡದ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರಂತೆ.
ಅವರ ಸ್ಥಾನಕ್ಕೆ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾಗೂ ಚೆನ್ನೈನ ಹಿರಿಯ ಆಟಗಾರ ರವೀಂದ್ರ ಜಡೇಜಾ ಹೆಗಲಿಗೆ ನಾಯಕತ್ವದ ಜವಾಬ್ದಾರಿ ಬರಲಿದೆಯಂತೆ.
ತಮ್ಮ ಬಳಿಕ ಜಡೇಜಾ ಸಿಎಸ್ ಕೆ ತಂಡದ ನಾಯಕರಾಗಲು ಸೂಕ್ತ ಎಂದು ಎಂಎಸ್ ಧೋನಿ ಫ್ರಾಂಚೈಸಿಗೆ ತಿಳಿಸಿದ್ದಾರಂತೆ.
ಅಂದಹಾಗೆ ಇದು ಎಂ.ಎಸ್. ಧೋನಿಯ ಕೊನೆಯ ಐಪಿಎಲ್ ಸೀಸನ್ ಆಗಲಿದೆ. ಹೀಗಾಗಿ ಸಿಎಸ್ ಕೆ ಫ್ರಾಂಚೈಸಿ ಹೊಸ ನಾಯಕನ ಹುಡುಕಾಟದಲ್ಲಿದೆ.
ಇದರ ಭಾಗವಾಗಿಯೇ ಜಡೇಜಾಗೆ ನಾಯಕತ್ವ ನೀಡಿದರೇ ಸೂಕ್ತ ಎಂದು ಧೋನಿ ಪ್ರತಿಪಾದಿಸಿದ್ದಾರಂತೆ. ಅಲ್ಲದೇ ಧೋನಿ ನಿವೃತ್ತಿ ಬಳಿಕ ಸಿಎಸ್ ಕೆ ತಂಡದಲ್ಲಿ ಪ್ರಮುಖ ಹುದ್ದೆ ನಿರ್ವಹಿಸಲಿದ್ದಾರಂತೆ.
ಆದ್ರೆ ಈ ಬಗ್ಗೆ ಫ್ರಾಂಚೈಸಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಇನ್ನು ಐಪಿಎಲ್-2022ರ ಮೆಗಾ ಹರಾಜು ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ, ಧೋನಿ ಜೊತೆಗೆ ಜಡೇಜಾ, ರುತುರಾಜ್ ಗಾಯಕ್ವಾಡ್ ಮತ್ತು ಮೊಯಿನ್ ಅಲಿ ಅವರನ್ನು ಉಳಿಸಿಕೊಂಡಿದೆ.