ಧೋನಿ ನಂಬಲು ಅಸಾಧ್ಯವಾದ ಕ್ರಿಕೆಟಿಗ – ಧೋನಿಯನ್ನು ಗುಣಗಾನ ಮಾಡಿದ ದಾದಾ…!
ಜುಲೈ 7 ಮತ್ತು ಜುಲೈ 8… ಟೀಮ್ ಇಂಡಿಯಾದ ಹಾಗೂ ವಿಶ್ವದ ಶ್ರೇಷ್ಠ ಮಾಜಿ ನಾಯಕರಿಬ್ಬರ ಹುಟ್ಟು ಹಬ್ಬ. ಜುಲೈ 7 ರಂದು ಧೋನಿ ಹುಟ್ಟು ಹಬ್ಬವಾದ್ರೆ, ಜುಲೈ 8ರಂದು ಗಂಗೂಲಿಯವರ ಹುಟ್ಟು ಹಬ್ಬ. ಅಷ್ಟಕ್ಕೂ ಧೋನಿ ಗಂಗೂಲಿಯ ಹುಡುಗ. ಧೋನಿಯ ಪ್ರತಿಭೆಯನ್ನು ಗುರುತಿಸಿ ಟೀಮ್ ಇಂಡಿಯಾಗೆ ಎಂಟ್ರಿ ಮಾಡಿಸಿದ್ದವರೇ ಸೌರವ್ ಗಂಗೂಲಿ. ಗಂಗೂಲಿ ಹಾಕಿಕೊಟ್ಟ ಹೆಜ್ಜೆಯಲ್ಲೇ ಮುನ್ನೆಡೆದ ಧೋನಿ ವಿಶ್ವ ಕ್ರಿಕೆಟ್‍ನ ಅಪ್ರತಿಮ ನಾಯಕರಾಗಿ ಹೊರಹೊಮ್ಮಿದ್ದರು. ಇದು ಗಂಗೂಲಿಗೆ ತುಂಬಾ ಖುಷಿ ಹಾಗೂ ಹೆಮ್ಮೆಯನ್ನುಂಟು ಮಾಡಿದೆ.
ಮಾಯಾಂಕ್ ಅಗರ್‍ವಾಲ್ ಜೊತೆಗಿನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಗಂಗೂಲಿ, ಎಲ್ಲರೂ ಧೋನಿಯವರನ್ನು ಬೆಸ್ಟ್ ಫೀನಿಶರ್ ಅಂತ ಕರೆಯುತ್ತಾರೆ. ಆದ್ರೆ ನನ್ನ ಪ್ರಕಾರ ಧೋನಿ ಕೆಳ ಕ್ರಮಾಂಕದ ಬದಲು ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ರೆ ಅದರ ರೋಚಕ ಕಥೆನೇ ಬೇರೆಯದ್ದೇ ಆಗುತ್ತಿತ್ತು. ಯಾಕಂದ್ರೆ ಧೋನಿ ಅಪಾಯಕಾರಿ ಬ್ಯಾಟ್ಸ್ ಮೆನ್. ಒಂದು ವೇಳೆ ಅವರು ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ರೆ ಅವರು ಇನ್ನಷ್ಟು ರನ್‍ಗಳನ್ನು ಸಿಡಿಸುತ್ತಿದ್ದರು ಅಂತ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಮಯಾಂಕ್ ಅಗರ್‍ವಾರ್ ಇನ್ನೊಂದು ಪ್ರಶ್ನೆಯೊಂದನ್ನು ಗಂಗೂಲಿ ಬಳಿ ಕೇಳಿದ್ದಾರೆ. ದಾದಾ ನೀವು ಮಹೀ ಭಾಯ್ ಅವರನ್ನು ಟೀಮ್ ಇಂಡಿಯಾದೊಳಗೆ ಕರೆದುಕೊಂಡು ಬಂದಿದ್ದಿರಿ ಅಲ್ವಾ ? ಇದು ನಿಜನಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಗಂಗೂಲಿ, ಹೇ.. ಇದು ನಿಜ. ಆದ್ರೆ ಅದು ನನ್ನ ಜವಾಬ್ದಾರಿ ಹಾಗೂ ಕರ್ತವ್ಯವಾಗಿತ್ತು. ನಾಯಕನಾದವನು ತನ್ನ ತಂಡಕ್ಕೆ ಬೇಕಾದ ಆಟಗಾರರನ್ನು ಹುಡುಕಬೇಕು. ಅವರ ಪ್ರತಿಭೆಯನ್ನು ಗುರುತಿಸಬೇಕು. ಹಾಗೇ ಪ್ರೋತ್ಸಾಹವನ್ನು ನೀಡಬೇಕು. ಉತ್ತಮ ತಂಡವನ್ನು ಕಟ್ಟುವುದು ನಾಯಕನಾದವನ ಜವಾಬ್ದಾರಿ. ಅದನ್ನೇ ನಾನು ಮಾಡಿದ್ದೇನೆ ಅಷ್ಟೇ ಅಂತ ಗಂಗೂಲಿ ಹೇಳಿದ್ದಾರೆ.
ಆಟಗಾರರ ಜೊತೆ ವಿಶ್ವಾಸವನ್ನು ಹೊಂದಿರಬೇಕು. ಅವರ ಸಾಮಥ್ರ್ಯವನ್ನು ಅರಿತುಕೊಳ್ಳಬೇಕು. ಭಾರತೀಯ ಕ್ರಿಕೆಟ್ ಧೋನಿಯಂತಹ ಆಟಗಾರರನನ್ನು ಪಡೆದಿರುವ ಬಗ್ಗೆ ನನಗೆ ಸಂತಸ, ಹೆಮ್ಮೆಯೂ ಇದೆ. ಯಾಕಂದ್ರೆ ಧೋನಿ ನಂಬಲು ಅಸಾಧ್ಯವಾದ ಕ್ರಿಕೆಟಿಗ ಎಂದು ಗಂಗೂಲಿ ಧೋನಿಯವರನ್ನು ಗುಣಗಾನ ಮಾಡಿದ್ದಾರೆ.
ಧೋನಿಯವರನ್ನು ನಾನು ವಿಶ್ವದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು ಎಂದು ಹೇಳುತ್ತೇನೆ. ಹಾಗಂತ ಅವರು ಅದ್ಭುತವಾದ ಮ್ಯಾಚ್ ಫಿನಿಶರ್ ಮಾತ್ರವಲ್ಲ. ಸ್ಪೋಟಕ ಬ್ಯಾಟ್ಸ್ ಮೆನ್ ಕೂಡ ಹೌದು. ನಾನು ನಾಯಕನಾಗಿದ್ದಾಗ ಅವರಿಗೆ ಮೂರನೇ ಕ್ರಮಾಂಕದಲ್ಲಿ ಆಡಲು ಅವಕಾಶ ಮಾಡಿಕೊಟ್ಟಿದ್ದೆ. ಆ ಪಂದ್ಯದಲ್ಲಿ ಅಮೋಘವಾದ ಶತಕವನ್ನು ಸಿಡಿಸಿದ್ದರು. ಧೋನಿಯ ಇನ್ನೊಂದು ವಿಶೇಷತೆ ಅಂದ್ರೆ ಎಷ್ಟೇ ಒತ್ತಡವಿರಲಿ. ಅವರು ಆರಾಮವಾಗಿ ಬ್ಯಾಟ್ ಬೀಸುತ್ತಾ ತಂಡವನ್ನು ಗೆಲುವಿನ ದಡ ಸೇರಿಸುತ್ತಾರೆ. ಇದು ಧೋನಿಯ ಸ್ಪೇಷಲ್ ಎಂದು ಗಂಗೂಲಿ ಧೋನಿಯ ಬ್ಯಾಟಿಂಗ್ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.