ನನ್ನನ್ನು ಸಂಪುಟದಿಂದ ಕೈ ಬಿಡುವ ಪ್ರಶ್ನೆಯೇ ಇಲ್ಲ: ಎಂಟಿಬಿ ನಾಗರಾಜ್
ಬೆಂಗಳೂರು : ಬೊಮ್ಮಾಯಿ ಅವರ ಸಂಪುಟದಿಂದ ನನ್ನನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಸವರಾಜ್ ಪದಗ್ರಹಣದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಗರಾಜ್, ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಯಾರಿಗೆ ಕೊಕ್ ನೀಡ್ತಾರೆ ಅನ್ನೋದು ಗೊತ್ತಿಲ್ಲ. ಆದ್ರೆ ನಾನು ಮಾತ್ರ ಬೊಮ್ಮಾಯಿ ಸಂಪುಟದಲ್ಲಿ ಇರುತ್ತೇನೆ. ಒಂದು ವೇಳೆ ಹೊಸಬರಿಗೆ ಸಚಿವ ಸ್ಥಾನ ನೀಡಬೇಕು ಎಂದು ಹೇಳಿದ್ರೆ ಅದಕ್ಕೂ ಒಪ್ಪುತ್ತೇನೆ. ನನ್ನನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ನಾನು ತುಂಬಾ ಆಶಾಭಾವನೆಯಲ್ಲಿದ್ದೇನೆ. ಬೊಮ್ಮಾಯಿ ಸಂಪುಟದಲ್ಲಿ ವಲಸಿಗರಾದ ನಾವು 11 ಜನರು ಸಚಿವರಾಗಿಯೇ ಮುಂದುವರಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಪ್ರಮಾಣವಚನ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ರಾಜ್ಯದ ಜನತೆ ಎರಡು ಬಾರಿ ಕೋವಿಡ್ ಸಂಕಷ್ಟವನ್ನು ಮತ್ತು ಅತಿವೃಷ್ಟಿಯಿಂದ ಪ್ರವಾಹ, ನೆರೆ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ನಾನು ಇಂದು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಅನೇಕ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳು ಸಾಕಷ್ಟಿವೆ. ಈ ಸಂದರ್ಭದಲ್ಲಿ ನಮ್ಮ ಪಕ್ಷದಲ್ಲಿರುವ ಎಲ್ಲಾ ನಾಯಕರನ್ನು ಒಗ್ಗೂಡಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರ ನಡೆಸುತ್ತೇನೆ, ಜನಪರ ಆಡಳಿತ ನೀಡುವುದು ನಮ್ಮ ಗುರಿಯಾಗಿದೆ ಎಂದರು.










