ಮುಂಬೈ, ಮೇ 29 : ವಿಶ್ವದ ಬೃಹತ್ ಕಂಪನಿಗಳು ರಿಲಯನ್ಸ್ ಜಿಯೋ ಕಂಪನಿಯಲ್ಲಿ ಹಣ ಹೂಡಿಕೆ ಮಾಡಲು ಸ್ಪರ್ಧೆಗಿಳಿದಂತೆ ಇದೆ. ಇತ್ತೀಚೆಗಷ್ಟೇ ಫೇಸ್ ಬುಕ್, ಸಿಲ್ವರ್ ಲೇಕ್, ವಿಸ್ಟಾ, ಜನರಲ್ ಅಟ್ಲಾಂಟಿಕ್ ಹಾಗೂ ಕೆಕೆಆರ್ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಹಣ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿದ್ದವು. ಇದೀಗ ಅಬುಧಾಭಿಯ ರಾಜ್ಯ ನಿಧಿ ಮುಬಡಾಲಾ ಇನ್ವೆಸ್ಟ್ಮೆಂಟ್ ಕಂಪನಿಯು ರಿಲಯನ್ಸ್ ಇಂಡಸ್ಟ್ರೀಸ್ ಡಿಜಿಟಲ್ ಯುನಿಟ್ ಜಿಯೋ ಪ್ಲಾಟ್ಫಾರ್ಮ್ಗಳಲ್ಲಿ ಸುಮಾರು 1 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ಮಾತುಕತೆ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಜಿಯೋ ಪ್ಲಾಟ್ಫಾರ್ಮ್ಗಳು ಸಂಗೀತ ಮತ್ತು ಚಲನಚಿತ್ರ ಅಪ್ಲಿಕೇಶನ್ಗಳು ಮತ್ತು ರಿಲಯನ್ಸ್ನ ಟೆಲಿಕಾಂ ಉದ್ಯಮವಾದ ಜಿಯೋ ಇನ್ಫೋಕಾಮ್ ಅನ್ನು ಹೊಂದಿದ್ದು, ಕಳೆದ ತಿಂಗಳಲ್ಲಿ ಫೇಸ್ಬುಕ್ ಇಂಕ್ ಸೇರಿದಂತೆ ಹೂಡಿಕೆದಾರರಿಂದ 10 ಬಿಲಿಯನ್ ಡಾಲರ್ ಮೊತ್ತವನ್ನು ಪಡೆದುಕೊಂಡಿದೆ.
ಇದಕ್ಕೆ ಸಂಬಂಧಿಸಿದಂತೆ ಅಬುಧಾಭಿಯ ರಾಜ್ಯ ನಿಧಿ ಮುಬಡಾಲಾ ಇನ್ವೆಸ್ಟ್ಮೆಂಟ್ ಕಂಪನಿಯು ಕಳಿಸಿರುವ ಇಮೇಲ್ನಲ್ಲಿ “ನಿಜವಾಗಿಯೂ ಜಿಯೋ ಪ್ಲಾಟ್ಫಾರ್ಮ್ ವಿಶ್ವದರ್ಜೆಯ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಅಷ್ಟೇ ಅಲ್ಲ ವಿಶ್ವದ ಅತಿದೊಡ್ಡ ಮಾರುಕಟ್ಟೆ ಸ್ಥಳಗಳಲ್ಲಿ ಒಂದನ್ನು ಪೂರೈಸುವ ಅಗಾಧ ಸಾಮರ್ಥ್ಯವನ್ನು ಹೊಂದಿದೆ” ಎಂದು ತಿಳಿಸಿದ್ದಾರೆ. ರಿಲಯನ್ಸ್ ಸಂಸ್ಥೆಯು ಇಲ್ಲಿಯವರೆಗೆ ಈ ಹೊಸ ಮಾತುಕತೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.








