ಜಿಯೋ ಮೂಲಕ ಬಿಸಿಸಿಐನ ಐಪಿಎಲ್ಗೆ ಪ್ರಾಯೋಜಕತ್ವ ನೀಡ್ತಾರಾ ಮುಖೇಶ್ ಅಂಬಾನಿ..?
ಕಷ್ಟಪಟ್ಟು.. ಇಷ್ಟಪಟ್ಟು.. ಮಾಡಲೇಬೇಕು ಎಂಬ ಹಠಕ್ಕೆ ಬಿದ್ದು ಬಿಸಿಸಿಐ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ಆಯೋಜನೆ ಮಾಡಲು ಸಿದ್ಧತೆ ನಡೆಸುತ್ತಿದೆ. ಆದ್ರೆ ಚೀನಾ ಮೂಲದ ವಿವೋ ಕಂಪೆನಿಯು ಐಪಿಎಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ. ಬಿಸಿಸಿಐ ವಿವೋ ಕಂಪೆನಿಯ ಪ್ರಾಯೋಜಕತ್ವ ವಹಿಸಿರುವ ಬಗ್ಗೆ ದೇಶಾದ್ಯಂತ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು.
ಇದೀಗ ಬಿಸಿಸಿಐ ಹೊಸ ಪ್ರಾಯೋಜಕರ ಹುಡುಕಾಟದಲ್ಲಿದೆ. ಈಗಾಗಲೇ ಬೈಜೂ ಆಪ್ ಮತ್ತು ಕೋಕಾ ಕೋಲಾ ಕಂಪೆನಿಗಳು ಐಪಿಎಲ್ ಪ್ರಾಯೋಜಕತ್ವಕ್ಕೆ ಮುಂದೆ ಬಂದಿವೆ. ಆದ್ರೆ ಬಿಸಿಸಿಐ ಟೆಂಡರ್ ಮೂಲಕ ಪ್ರಾಯೋಜಕತ್ವವನ್ನು ಪಡೆಯಲು ಮುಂದಾಗಿದೆ.
ಈ ನಡುವೆ ಕೋವಿಡ್ 19ನಿಂದಾಗಿ ಅನೇಕ ಕಂಪೆನಿಗಳ ಆರ್ಥಿಕ ಸ್ಥಿತಿಗತಿ ಅಷ್ಟೇನೂ ಚೆನ್ನಾಗಿಲ್ಲ. ಇರುವುದರಲ್ಲಿ ಭಾರತದ ಕುಬೇರ ರಿಲ್ಯಾಯನ್ಸ್ ಗ್ರೂಪ್ನ ಮುಖೇಶ್ ಅಂಬಾನಿಯ ಬೊಕ್ಕಸಕ್ಕೆ ಕೋವಿಡ್ 19 ಅಷ್ಟೇನೂ ನಷ್ಟ ಉಂಟು ಮಾಡಿಲ್ಲ. ಕೋವಿಡ್ 19 ಸಮಯದಲ್ಲೂ ತನ್ನ ಬೊಕ್ಕಸವನ್ನು ತುಂಬಿ ತುಳುಕುವಂತೆ ಮಾಡಿಕೊಂಡಿದೆ ರಿಲ್ಯಾಯನ್ಸ್ ಗ್ರೂಪ್.
ಈ ನಡುವೆ ಬಿಸಿಸಿಐ ಐಪಿಎಲ್ ಪ್ರಾಯೋಜಕತ್ವಕ್ಕೆ ಕನಿಷ್ಠವಾದ್ರೂ 400 ಕೋಟಿ ರೂಪಾಯಿ ಸಿಗಬೇಕು ಎಂಬ ಲೆಕ್ಕಚಾರದಲ್ಲಿದೆ. ಯಾಕಂದ್ರೆ ಈ ಹಿಂದಿನ ವಿವೋ ಕಂಪೆನಿಯು ಐದು ವರ್ಷ ಒಪ್ಪಂದ ಮಾಡಿಕೊಂಡಿದ್ದು ವಾರ್ಷಿಕವಾಗಿ 444 ಕೋಟಿ ರೂಪಾಯಿ ಪಾವತಿ ಮಾಡುತ್ತಿತ್ತು. ಹೀಗಾಗಿ ಅಷ್ಟೇ ಮೊತ್ತ ಸಿಗದಿದ್ರೂ 400 ಕೋಟಿಯಾದ್ರೂ ಸಿಗಬೇಕು ಎಂಬುದು ಬಿಸಿಸಿಐ ಪ್ಲಾನ್ ಆಗಿದೆ.
ಇನ್ನು ಭಾರತದ ಕಂಪೆನಿಗಳ ಪೈಕಿ ಇಷ್ಟು ದೊಡ್ಡ ಮೊತ್ತವನ್ನು ಪಾವತಿ ಮಾಡುವಂತಹ ತಾಕತ್ತು ಸದ್ಯದ ಪರಿಸ್ಥಿತಿಯಲ್ಲಿ ಮುಖೇಶ್ ಅಂಬಾನಿಗೆ ಮಾತ್ರ ಸಾಧ್ಯ. ಅದು ಅಲ್ಲದೆ ಐಪಿಎಲ್ ನಲ್ಲಿ ರಿಲ್ಯಾಯನ್ಸ್ ಗ್ರೂಪ್ ತಂಡವಾಗಿರುವ ಮುಂಬೈ ಇಂಡಿಯನ್ಸ್ ಕೂಡ ಆಡುತ್ತಿದೆ. ಅಲ್ಲದೆ ಬೇರೆ ಬೇರೆ ಫ್ರಾಂಚೈಸಿಗಳಿಗೂ ಮುಖೇಶ್ ಅಂಬಾನಿ ಒಡೆತನದ ಕಂಪೆನಿಗಳಿಂದ ಹಣ ಹರಿದು ಬರುತ್ತಿದೆ.
ಈ ಹಿಂದೆ 1987ರ ವಿಶ್ವ ಕಪ್ ಟೂರ್ನಿಗೆ ರಿಲ್ಯಾಯನ್ಸ್ ಕಂಪೆನಿಯು ಪ್ರಾಯೋಜಕತ್ವವನ್ನು ನೀಡಿತ್ತು. ಆನಂತರವೂ ರಿಲ್ಯಾಯನ್ಸ್ ಕಂಪೆನಿಯೂ ಬಿಸಿಸಿಐ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ಕ್ರಿಕೆಟ್ ಪಂದ್ಯಗಳಿಗೆ ರಿಲ್ಯಾಯನ್ಸ್ ಕಂಪೆನಿಯು ಪ್ರಾಯೋಜಕತ್ವವನ್ನು ನೀಡುತ್ತಿವೆ.
ಇದೀಗ ರಿಲ್ಯಾಯನ್ಸ್ ಕಂಪೆನಿಯ ಅಂಗ ಸಂಸ್ಥೆಯಾದ ಜಿಯೋ ಕಂಪೆನಿಯ ಪ್ರಚಾರಕ್ಕಾಗಿ ಈ ಬಾರಿಯ ಐಪಿಎಲ್ ಟೂರ್ನಿಯ ಟೈಟಲ್ ಪ್ರಾಯೋಜಕತ್ವ ನೀಡಿದ್ರೂ ಅಚ್ಚರಿ ಏನು ಪಡಬೇಕಾಗಿಲ್ಲ. ಯಾವುದಕ್ಕೂ ಮುಖೇಶ್ ಅಂಬಾನಿ ಮನಸು ಮಾಡಬೇಕು ಅಷ್ಟೇ. ಯಾಕಂದ್ರೆ ಮುಖೇಶ್ ಅಂಬಾನಿಗೆ 400 ಕೋಟಿ ರೂಪಾಯಿ ಸಣ್ಣಮೊತ್ತ. ಆದ್ರೂ ಪಕ್ಕಾ ಬಿಸಿನೆಸ್ ಮೈಂಡ್ ನಲ್ಲೆ ಯೋಚನೆ ಮಾಡುವ ಮುಖೇಶ್ ಅಂಬಾನಿ ಲಾಭವಿಲ್ಲದೆ ಐಪಿಎಲ್ ಪ್ರಾಯೋಜಕತ್ವಕ್ಕೆ ಬಂಡವಾಳ ಹಾಕುವವರಲ್ಲ.