ವಿಶ್ವದಲ್ಲೇ ಅತಿದೊಡ್ಡ ಶ್ರೀಮಂತ ಮುಖೇಶ್ ಅಂಬಾನಿ ಮತ್ತು ಮಧ್ಯಮ ವರ್ಗದ ನೀತಾ ಅಂಬಾನಿಯವರ ಮದುವೆಯ ಕಥೆ ಕುತೂಹಲಕಾರಿಯಾಗಿದೆ. ಮಧ್ಯಮ ವರ್ಗದ ನೀತಾ, ಅಂಬಾನಿಯ ಸಂಪತ್ತು ಮತ್ತು ಸ್ಥಾನಮಾನಕ್ಕಾಗಿ ಅವರನ್ನು ಎಂದಿಗೂ ಮದುವೆಯಾಗಲಿಲ್ಲ.
ಮುಂಬೈ, ಅಗಸ್ಟ್ 15: ವಿಶ್ವದಲ್ಲಿಯೇ ನಾಲ್ಕನೇ ಅತಿ ದೊಡ್ಡ ಶ್ರೀಮಂತ, ರಿಲಾಯನ್ಸ್ ಇಂಡಸ್ಟ್ರೀಸ್ ಚೇರಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ಮಧ್ಯಮ ವರ್ಗದ ಕುಟುಂಬದ ನೀತಾ ಅಂಬಾನಿಯನ್ನು ಹೇಗೆ ವಿವಾಹವಾದರು ಎಂಬುದು ನಿಮಗೆ ತಿಳಿದಿದೆಯೇ? ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿಯವರ ಮದುವೆಯ ಕಥೆಯೂ ಕುತೂಹಲಕಾರಿಯಾಗಿದೆ.

ನೀತಾ ಅಂಬಾನಿ ಶಾಲಾ ಶಿಕ್ಷಕಿಯಾಗಿದ್ದರು, 800 ರೂ ಅವರ ಮಾಸಿಕ ವೇತನವಾಗಿತ್ತು. ನೀತಾ ಅಂಬಾನಿ ಭರತನಾಟ್ಯದಲ್ಲಿ ಪರಿಣಿತರಾಗಿದ್ದರು ಮತ್ತು ಇದು ಮುಖೇಶ್ ಅಂಬಾನಿಯೊಂದಿಗೆ ಅವರ ವಿವಾಹ ನಡೆಯಲು ಕಾರಣವಾಯಿತು. ಮಾಧ್ಯಮ ವರದಿಯ ಪ್ರಕಾರ, ಒಮ್ಮೆ ನೀತಾ ಬಿರ್ಲಾ ಕುಟುಂಬದ ಕಾರ್ಯಕ್ರಮದಲ್ಲಿ ಭರತನಾಟ್ಯ ನರ್ತಕಿಯಾಗಿ ಪ್ರದರ್ಶನ ನೀಡಲು ಬಂದಿದ್ದರು.
ಬಿರ್ಲಾ ಕುಟುಂಬದ ಕಾರ್ಯಕ್ರಮದಲ್ಲಿ ಭಾಗವಹಿಸಿದವರಲ್ಲಿ ಧೀರೂಭಾಯಿ ಅಂಬಾನಿ ಮತ್ತು ಅವರ ಪತ್ನಿ ಕೋಕಿಲಾಬೆನ್ ಕೂಡ ಸೇರಿದ್ದರು. ನೀತಾ ಅವರ ನೃತ್ಯ ಅಂಬಾನಿಯವರ ಹೃದಯವನ್ನು ಕದ್ದಿತು. ಅವರು ನೀತಾರನ್ನು ತಮ್ಮ ಮನೆಗೆ ಸೊಸೆಯನ್ನಾಗಿ ತರಲು ನಿರ್ಧರಿಸಿದರು. ಈ ಸಂಬಂಧಕ್ಕೆ ನೀತಾ ಸಿದ್ಧವಾಗಿಲ್ಲದಿದ್ದರೂ ಅಂಬಾನಿ ಕುಟುಂಬವು ನೀತಾ ಅವರನ್ನು ಒಪ್ಪಿಕೊಂಡು ಮುಖೇಶ್ ಅಂಬಾನಿ ಜೊತೆ ವಿವಾಹ ಮಾಡಲು ನಿರ್ಧರಿಸಿದ್ದರು.

ಮಧ್ಯಮ ವರ್ಗದ ನೀತಾ, ಅಂಬಾನಿಯ ಸಂಪತ್ತು ಮತ್ತು ಸ್ಥಾನಮಾನಕ್ಕಾಗಿ ಅವರನ್ನು ಎಂದಿಗೂ ಮದುವೆಯಾಗಲಿಲ್ಲ. ನೀತಾ ಮದುವೆಯ ನಂತರವೂ ಶಾಲೆಯಲ್ಲಿ ಕಲಿಸಲು ಅವಕಾಶ ನೀಡಿದರೆ ಮಾತ್ರ ಮದುವೆಗೆ ಒಪ್ಪುವುದಾಗಿ ಷರತ್ತು ಇಟ್ಟಿದ್ದರಂತೆ. ಅಂಬಾನಿ ಕುಟುಂಬ ಇದಕ್ಕೆ ಒಪ್ಪಿಗೆ ನೀಡಿದ ನಂತರ ನೀತಾ ಮದುವೆಗೆ ಒಪ್ಪಿಕೊಂಡರು ಮತ್ತು ಶ್ರೀಮಂತ ಕುಟುಂಬದ ಸೊಸೆಯಾದ ನಂತರವೂ ನೀತಾ ಖಾಸಗಿ ಶಾಲೆಯಲ್ಲಿ ಟೀಚರ್ ಆಗಿ ಸೇವೆ ಸಲ್ಲಿಸಿದ್ದರು.
ಸಾಂಪ್ರದಾಯ ಪ್ರಕಾರ ಧೀರೂಭಾಯಿ ಅಂಬಾನಿ ನೀತಾ ಮತ್ತು ಅವರ ತಂದೆಯ ಬಳಿ ಮದುವೆ ಪ್ರಸ್ತಾಪವನಿಟ್ಟರು.
ಕುಟುಂಬದ ಅಂಗೀಕಾರದ ನಂತರ, ನೀತಾ ಮತ್ತು ಮುಖೇಶರ ಪ್ರಣಯ ಪ್ರಾರಂಭವಾಯಿತು. ಇವರಿಬ್ಬರಿಗೂ ಆ ದಿನಗಳಲ್ಲಿ ಹೆಚ್ಚಿನ ಸಮಯ ಕಳೆಯಲು ಅವರ ಬಿಡುವಿಲ್ಲದ ಕೆಲಸ ಅಡ್ಡಿಯಾಗಿತ್ತು.

ಮುಖೇಶ್ ನಿರತ, ವೃತ್ತಿಪರ ವ್ಯಕ್ತಿಯಾಗಿದ್ದರು ಮತ್ತು ರಾತ್ರಿ 11 ಗಂಟೆಯ ನಂತರ ಮಾತ್ರ ಕೆಲಸದಿಂದ ವಿರಾಮ ತೆಗೆದುಕೊಳ್ಳುತ್ತಿದ್ದರು. ನೀತಾ ಸ್ವತಃ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಕಾರಣ ಇವರಿಬ್ಬರಿಗೂ ಒಬ್ಬರಿಗೊಬ್ಬರು ಹೆಚ್ಚಿನ ಸಮಯ ಕೊಡಲು ಸಾಧ್ಯವಾಗುತ್ತಿರಲಿಲ್ಲ.
ಆದಾಗ್ಯೂ, ಇವರಿಬ್ಬರು ತಮ್ಮ ಬಿಡುವಿಲ್ಲದ ಸಮಯದಲ್ಲೂ ಜೊತೆಯಾಗಿ ಸಮಯ ಕಳೆಯಲು ಪ್ರಯತ್ನಿಸುತ್ತಿದ್ದರು.
ಮುಖೇಶ್ ಅವರ ನಮ್ರತೆ ನೀತಾರನ್ನು ಆಶ್ಚರ್ಯಗೊಳಿಸಿತಂತೆ. ನೀತಾ ಒಮ್ಮೆ ಮರ್ಸಿಡಿಸ್ ಕಾರಿನಲ್ಲಿ ಮುಖೇಶ್ ಜೊತೆಗೆ ಪ್ರಯಾಣಿಸುತ್ತಿದ್ದಾಗ ಕಾರನ್ನು ನಿಲ್ಲಿಸಲು ಹೇಳಿ ಮುಖೇಶ್ ರನ್ನು ಕೇಳಿದರಂತೆ. ನೀವು ನಿಜವಾಗಿಯೂ ನನ್ನ ಪ್ರೀತಿಸುವುದಾದರೆ ನನ್ನಂತೆ ಬಸ್‌ನಲ್ಲಿ ಪ್ರಯಾಣಿಸಬೇಕು ಎಂದು. ಅದಕ್ಕೆ ಕೂಡಲೇ ಒಪ್ಪಿದ ಮುಖೇಶ್ ಬಸ್‌ನಲ್ಲಿ ನೀತಾ ಜೊತೆಗೆ ಮುಂದಿನ ಸೀಟಿನಲ್ಲಿ ಕುಳಿತು ಜುಹು ಬೀಚ್‌ಗೆ ಹೋದರಂತೆ. ಇದರಿಂದ ನೀತಾಗೆ ಮುಖೇಶ್ ಮೇಲಿನ ಪ್ರೀತಿ ಮತ್ತಷ್ಟು ಬಲವಾಯಿತಂತೆ. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ನೀತಾ ಬಹಿರಂಗಪಡಿಸಿದ್ದಾರೆ.

1985 ರಲ್ಲಿ ಇವರಿಬ್ಬರು ವಿವಾಹವಾದರು ಮತ್ತು ಇವರಿಗೆ ಅನಂತ್, ಆಕಾಶ್ ಮತ್ತು ಇಶಾ ಎಂಬ ಮೂವರು ಮಕ್ಕಳಿದ್ದಾರೆ. ಸಮಾನತೆ, ಬೆಂಬಲ, ಪ್ರೀತಿ ಮತ್ತು ಕಾಳಜಿಯ ಸರಿಯಾದ ಸಮತೋಲನದೊಂದಿಗೆ, ಇಬ್ಬರೂ ತಮ್ಮ ಕನಸುಗಳನ್ನು ಬೆನ್ನಟ್ಟುತ್ತಾ ಸಂತೋಷದ ಮತ್ತು ಯಶಸ್ವಿ ಸಂಬಂಧದಲ್ಲಿದ್ದಾರೆ.








