Mulayam Singh Yadav: ರಾಜಕೀಯದ ಕುಸ್ತಿ ಪಟು ಮುಲಾಯಂ ಸಿಂಗ್ ಯಾದವ್
ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ದೀರ್ಘಕಾಲದ ಅನಾರೋದಿಂದಾಗಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. 82 ವರ್ಷದ ಹಿರಿಯ ನಾಯಕ ಹರಿಯಾಣದ ಗುರುಗ್ರಾಮ್ ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹಲವು ದಿನಗಳಿಂದ ಲೈಫ್ ಸಫೋರ್ಟ್ ಸಿಸ್ಟಮ್ ನೊಂದಿಗೆ ಐಸಿಯೂ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮುಲಾಯಂ ಅವರನ್ನ ಆಗಸ್ಟ್ 22 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಕ್ಟೋಬರ್ 1 ರ ರಾತ್ರಿಯಿಂದ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪ್ರಸ್ತುತ ಉತ್ತರ ಪ್ರದೇಶದ ಮೈನ್ಪುರಿಯಿಂದ ಲೋಕಸಭಾ ಸದಸ್ಯರಾಗಿರುವ ಅವರು ಏಳು ಬಾರಿ ಸದನಕ್ಕೆ ಆಯ್ಕೆಯಾಗಿದ್ದರು.
ಮುಲಾಯಂ ತಮ್ಮ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರ ಪುತ್ರ ಅಖಿಲೇಶ್ ಯಾದವ್ ಈಗ ಪಕ್ಷದ ಅಧ್ಯಕ್ಷರಾಗಿ ಜವಬ್ದಾರಿ ಮುನ್ನಡೆಸುತ್ತಿದ್ದಾರೆ.
ಉತ್ತರ ಪ್ರದೇಶದ ಸೈಫಾಯಿ ಗ್ರಾಮದಲ್ಲಿ 1939 ರಲ್ಲಿ ಜನಿಸಿದ ಮುಲಾಯಂ ಸಿಂಗ್ ಯಾದವ್ 3 ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು 1996 ರಿಂದ 1998 ರ ನಡುವೆ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದರು. ಮುಲಾಯಂ ಸಿಂಗ್ ಯಾದವ್ ಅವರು ರಾಮ್ ಮನೋಹರ್ ಲೋಹಿಯಾ, ಮಧು ಲಿಮಯೆ ಮತ್ತು ಇತರರಂತಹ ಸಮಾಜವಾದಿ ನಾಯಕರಿಂದ ಪ್ರಭಾವಿತರಾಗಿ ರಾಜಕೀಯಕ್ಕೆ ಧುಮುಕಿದರು.
‘ನೇತಾಜಿ’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮುಲಾಯಂ ಸಿಂಗ್ ಯಾದವ್ ಅವರನ್ನ ಅವರ ಬೆಂಬಲಿಗರು ‘ಧರ್ತಿಪುತ್ರ’ ಅಥವಾ ಮಣ್ಣಿನ ಮಗ ಎಂದೂ ಕರೆಯುತ್ತಾರೆ. ಕುಸ್ತಿಪಟುವಾಗಿದ್ದ ಮುಲಾಯಂ ರಾಜಕೀಯದಲ್ಲಿ ಹಲವು ತಂತ್ರಗಾರಿಕೆಯ ಪಟ್ಟುಗಳನ್ನ ಹಾಕುತ್ತಿದ್ದರು.
ಮುಲಾಯಂ ಸಿಂಗ್ ಅವರು 1967 ರಲ್ಲಿ ಉತ್ತರ ಪ್ರದೇಶದ ವಿಧಾನಸಭೆಗೆ ಮೊದಲ ಭಾರಿಗೆ ಆಯ್ಕೆಯಾಗಿದ್ದರು. 10 ಬಾರಿ ವಿಧಾನಸಭೆಯ ಸದಸ್ಯರಾಗಿದ್ದಾರೆ.
1977 ರಲ್ಲಿ, ಅವರು ರಾಮ್ ನರೇಶ್ ಯಾದವ್ ನೇತೃತ್ವದ ಸಚಿವ ಸಂಪುಟದಲ್ಲಿ ಸಹಕಾರಿ ಮತ್ತು ಪಶುಸಂಗೋಪನೆ ಸಚಿವರಾಗಿ ಸೇರ್ಪಡೆಗೊಂಡರು. ಅದೇ ವರ್ಷದಲ್ಲಿ ಅವರು ಲೋಕದಳದ ಅಧ್ಯಕ್ಷರಾದಾಗ, ಪಕ್ಷದಲ್ಲಿನ ವಿಭಜನೆಯ ನಂತರ ಅವರು ಲೋಕದಳ (ಬಿ) ನೇತೃತ್ವ ವಹಿಸಿದರು.
ಮುಲಾಯಂ 1980 ರಲ್ಲಿ ಜನತಾ ದಳದ ಅಧ್ಯಕ್ಷರಾಗಿ ಚುನಾಯಿತರಾದರು. 1992 ರಲ್ಲಿ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. ಒಂದು ವರ್ಷದ ನಂತರ BSP ಯೊಂದಿಗೆ ಮೈತ್ರಿ ಮಾಡಿಕೊಂಡು ಯುಪಿಯಲ್ಲಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರು.
ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ನಿಧನಕ್ಕೆ ಹಲವು ಗಣ್ಯರು ಟ್ವೀಟ್ ಮಾಡುವ ಮೂಲಕ ಸಂತಾಪವನ್ನ ಸೂಚಿಸಿದ್ದಾರೆ. ಮುಲಾಯಂ ಅವರ ನಿಧನಕ್ಕೆ ಉತ್ತರಪ್ರದೇಶದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದ್ದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಕ್ರಿಯೆ ನಡೆಯಲಿದೆ.