ಬೆಂಗಳೂರು : ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನವರಸನಾಯಕ ಜಗ್ಗೇಶ್, ತಮ್ಮ ಬಾಲ್ಯ, ಕಷ್ಟದ ದಿನ, ಸಂತಸ, ನೋವು ಎಲ್ಲವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಅದರಂತೆ ಇದೀಗ ತಮ್ಮ ತಾಯಿಯ ಬಗ್ಗೆ ಬರೆದುಕೊಂಡಿದ್ದಾರೆ.
ಜಗ್ಗೇಶ್ ಅವರ ತಾಯಿ ನಿಧನರಾಗಿ ಇಂದಿಗೆ 26 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ನಟ ಜಗ್ಗೇಶ್ ಈ ಬಗ್ಗೆ ಟ್ವಿಟ್ಟರ್ ನಲ್ಲಿ ತಮ್ಮ ತಾಯಿಯ ಅಗಲಿಕೆಯ ನೋವನ್ನು ಹಂಚಿಕೊಂಡಿದ್ದಾರೆ.
ಜಗ್ಗೇಶ್ ಟ್ವೀಟ್ ನಲ್ಲಿ..
“ನನಗೆ ಉಸಿರು ನೀಡಿ ಜಗತ್ತಿಗೆ ಪರಿಚಯಿಸಿ, ಜಗದಲ್ಲಿ ಬದುಕುವ ವಿಧಿವಿಧಾನ, ಸಂಸ್ಕಾರ, ಆಧ್ಯಾತ್ಮ ಕಲಿಸಿದ ಪ್ರಥಮ ದೇವರು ಗುರು ನನ್ನ ಅಗಲಿದ ದಿನ. ಅಮ್ಮ ನನ್ನ ಬಿಟ್ಟುಹೋಗಿ ಇಂದಿಗೆ 26 ವರ್ಷವಾಗಿದೆ. ಅವಳ ಇಂದು ಮಾತ್ರ ನೆನೆವ ಜನ್ಮವಲ್ಲಾ ನನ್ನದು. ಅವಳನ್ನ ನನ್ನ ಉಸಿರಿನ ಜೊತೆಯೇ ಬೆರೆಸಿರುವೆ. ಅವಳ ಕೊನೆ ಉಸಿರಿನ ಕೊಠಡಿಯ ಚಿತ್ರವಿದು. ಮಾತೃದೇವೋಭವ” ಎಂದು ಬರೆದುಕೊಂಡಿದ್ದಾರೆ. 
ಈ ಹಿಂದೆ ಕೂಡ ನಟ ಜಗ್ಗೇಶ್ ಅವರು ತಮ್ಮ ತಾಯಿಯ ನಿಧನ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು. ಜಗ್ಗೇಶ್ ತಾಯಿ ನಂಜಮ್ಮ ಕೋಮಲ್ ಮದುವೆಯಾದ 20 ದಿನಕ್ಕೆ ಮೃತಪಟ್ಟಿದ್ದು, ಈ ಬಗ್ಗೆ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದರು. “ಅಮ್ಮ ನನಗೆ ಬೇಗ ಕೋಮಲ್ ಮದುವೆ ಮಾಡಿಸು ಈಶ. ಯಾಕೋ ಶಿವ ಕರೆದಂತೆ ಆಗುತ್ತಿದೆ ಎಂದು ಹಿಂಸೆಕೊಟ್ಟಳು. ವಾರದಲ್ಲೆ ಸ್ನೇಹಿತನ ತಂಗಿಯನ್ನ ಒಪ್ಪಿಸಿ 20 ವರ್ಷದ ಕೋಮಲ್ ಗೆ ಮದುವೆ ಮಾಡಿಸಿಬಿಟ್ಟೆ. ಕೂತು ಚಪ್ಪಾಳೆತಟ್ಟಿ ಆನಂದಿಸಿ ಅವನು ಮದುವೆಯಾದ 20 ದಿನಕ್ಕೆ ದೇಹತ್ಯಾಗ ಮಾಡಿಬಿಟ್ಟಳು ಅಮ್ಮ” ಎಂದು ಟ್ವಿಟ್ಟರ್ ನಲ್ಲಿ ಜಗ್ಗೇಶ್ ಬರೆದುಕೊಂಡಿದ್ದರು.








