ಪೃಥ್ವಿ ಶಾ ಬಾಯ್ಸ್ ಗೆ `ವಿಜಯ’ ಮಾಲೆ : ನಾಲ್ಕನೇ ಬಾರಿಗೆ ಪ್ರಶಸ್ತಿ ಗೆದ್ದ ಮುಂಬೈ
ನವದೆಹಲಿ : ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಟೂರ್ನಿ ಫೈನಲ್ ಮ್ಯಾಚ್ ನಲ್ಲಿ ಮುಂಬೈ ತಂಡ ಗೆಲುವಿನ ಕೇಕೆ ಹಾಕಿದೆ. ಆದಿತ್ಯ ತಾರೆ ಅಜೇಯ ಶತಕ ಮತ್ತು ನಾಯಕ ಪೃಥ್ವಿ ಶಾ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಮುಂಬೈ ನಾಲ್ಕನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿಯನ್ನ ಎತ್ತಿ ಹಿಡಿದಿದೆ.
ಭಾನುವಾರ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಉತ್ತರ ಪ್ರದೇಶ, ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 312 ರನ್ ಗಳಿಸಿತ್ತು. ಉತ್ತರ ಪ್ರದೇಶ್ ಪರ ಆರಂಭಿಕ ಬ್ಯಾಟ್ಸ್ ಮನ್ ಮಾಧವ್ ಕೌಶಿಕ್ ಸ್ಫೋಟಕ (158) ರನ್, ಗಳಿಸಿದರೆ, ಸಮರ್ಥ್ ಸಿಂಗ್ 56, ಅಕ್ಷದೀಪ್ ನಾಥ್ 55 ರನ್ ಗಳಿಸಿದರು.
ಈ ಗುರಿಯನ್ನ ಬೆನ್ನಟ್ಟಿದ ಮುಂಬೈ ತಂಡಕ್ಕೆ ಪೃಥ್ವಿ ಶಾ ಉತ್ತಮ ಒದಗಿಸಿಕೊಟ್ಟರು. ಅವರು ಕೇವಲ 39 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್ ಗಳ ಸಹಿತ 73 ರನ್ ಗಳಿಸಿದರು. ಜೈಸ್ವಾಲ್ (29) ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಇವರಿಬ್ಬರ ನಂತರ ಒಂದಾದ ಆದಿತ್ಯ ತಾರೆ ಮತ್ತು ಶಾಮ್ಸ್ ಮುಲಾನಿ 3ನೇ ವಿಕೆಟ್ ಗೆ 88 ರನ್ ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ಸನಿಹ ತಂದರು. ಈ ಹಂತದಲ್ಲಿ 36 ರನ್ ಗಳಿಸಿದ್ದ ಮುಲಾನಿ ಔಟಾದರು. ಬಳಿಕ ಕ್ರೀಸ್ ಗೆ ಬಂದ ಶಿವಂ ದುಬೆ, ಆದಿತ್ಯ ತಾರೆ ಜೊತೆಗೂಡಿ 4ನೇ ವಿಕೆಟ್ ಗೆ 88 ರನ್ ಸೇರಿಸಿದರು. ಗೆಲುವಿನ ಅಂಚಿನಲ್ಲಿ ಶಿವಂದುಬೆ 42 ರನ್ ಗಳಿಸಿ ಔಟ್ ಆದ್ರು. ಇತ್ತ ಜವಾಬ್ದಾರಿಯುವ ಬ್ಯಾಟಿಂಗ್ ನಡೆಸಿದ ಆದಿತ್ಯ ತಾರೆ 107 ಎಸೆತಗಳಲ್ಲಿ 18 ಬೌಂಡರಿ ಸಹಿತ ಅಜೇಯ 118 ರನ್ ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಈ ಮೂಲಕ ಮುಂಬೈ ತಂಡ ನಾಲ್ಕನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿಯನ್ನ ಗೆದ್ದು ಗೆಲುವಿನ ನಗೆ ಬೀರಿತು.









