ತುಮಕೂರು: ರಾಜ್ಯ ರಾಜಕೀಯದಲ್ಲಿ ದಲಿತ ಮುಖ್ಯಮಂತ್ರಿ ಕೂಗು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳದ ಕಿಡಿ ಹೊತ್ತಿಕೊಂಡಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ತವರು ಜಿಲ್ಲೆ ಹಾಗೂ ರಾಜಕೀಯ ಕರ್ಮಭೂಮಿಯಾದ ತುಮಕೂರಿನಲ್ಲೇ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರಿಗೆ ಮುಂದಿನ ಮುಖ್ಯಮಂತ್ರಿ ಎಂಬ ಜೈಕಾರ ಮೊಳಗಿರುವುದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಸಿದ್ದರಾಮಯ್ಯ ಸಂಪುಟದಲ್ಲಿ ದಲಿತರಿಗೆ ಉನ್ನತ ಸ್ಥಾನಮಾನ ನೀಡುವ ಕುರಿತು ಚರ್ಚೆಗಳು ನಡೆಯುತ್ತಿರುವಾಗಲೇ, ತುಮಕೂರಿನಲ್ಲಿ ನಡೆದ ಈ ಘಟನೆ ಕಾಂಗ್ರೆಸ್ ಪಾಳಯದ ಎಡ ಮತ್ತು ಬಲ ಗುಂಪುಗಳ ನಡುವಿನ ಶೀತಲ ಸಮರವನ್ನು ಬೀದಿಗೆ ತಂದಂತಾಗಿದೆ.
ತುಮಕೂರಿನಲ್ಲಿ ಮಾಜಿ ಶಾಸಕ ಗಂಗಹನುಮಯ್ಯ ಅವರ ನಿವಾಸಕ್ಕೆ ಹಿರಿಯ ನಾಯಕ ಹಾಗೂ ಸಚಿವ ಕೆ.ಹೆಚ್. ಮುನಿಯಪ್ಪ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಲ್ಲಿ ಜಮಾಯಿದ್ದ ಮುನಿಯಪ್ಪ ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ಅತ್ಯುತ್ಸಾಹದಿಂದ ಮುಂದಿನ ಮುಖ್ಯಮಂತ್ರಿ ಕೆ.ಹೆಚ್. ಮುನಿಯಪ್ಪ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಪರಮೇಶ್ವರ್ ಅವರ ಹಿಡಿತವಿರುವ ಜಿಲ್ಲೆಯಲ್ಲೇ ಮುನಿಯಪ್ಪ ಪರ ಈ ಮಟ್ಟದ ಬೆಂಬಲ ವ್ಯಕ್ತವಾಗಿರುವುದು ಪರಮೇಶ್ವರ್ ಬಣಕ್ಕೆ ಮುಜುಗರ ಉಂಟುಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಎಡ-ಬಲ ಸಮುದಾಯಗಳ ಪ್ರತಿಷ್ಠೆಯ ಕಣ
ದಲಿತ ಸಿಎಂ ವಿಚಾರ ಮುನ್ನೆಲೆಗೆ ಬಂದಾಗಲೆಲ್ಲಾ ಕಾಂಗ್ರೆಸ್‌ನಲ್ಲಿ ಒಳಪಂಗಡಗಳ ಪೈಪೋಟಿ ಸಹಜವಾಗಿ ಎದುರಾಗುತ್ತದೆ. ಸದ್ಯ ಬಲಗೈ ಸಮುದಾಯವನ್ನು ಪ್ರತಿನಿಧಿಸುವ ಡಾ. ಜಿ. ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಅವರ ಬೆಂಬಲಿಗರು ಮತ್ತು ಸ್ವಾಮೀಜಿಗಳು ಒತ್ತಾಯ ಮಾಡುತ್ತಿದ್ದಾರೆ. ಇದಕ್ಕೆ ಸೆಡ್ಡು ಹೊಡೆಯುವಂತೆ, ಎಡಗೈ ಸಮುದಾಯದ ಹಿರಿಯ ನಾಯಕ ಕೆ.ಹೆಚ್. ಮುನಿಯಪ್ಪ ಅವರಿಗೆ ಪಟ್ಟ ಕಟ್ಟಬೇಕು ಎಂಬ ಕೂಗು ಈಗ ಜೋರಾಗಿದೆ. ತುಮಕೂರಿನಲ್ಲಿ ನಡೆದ ಘಟನೆ ಈ ಪೈಪೋಟಿಗೆ ತುಪ್ಪ ಸುರಿದಂತಾಗಿದೆ.
ಪರಮೇಶ್ವರ್ ತವರಲ್ಲಿ ಶಕ್ತಿ ಪ್ರದರ್ಶನವೇ?
ತುಮಕೂರು ಡಾ. ಜಿ. ಪರಮೇಶ್ವರ್ ಅವರ ಭದ್ರಕೋಟೆ. ಇಲ್ಲಿ ಬಂದು ಮುನಿಯಪ್ಪ ಬೆಂಬಲಿಗರು ಸಿಎಂ ಘೋಷಣೆ ಕೂಗಿರುವುದು ಕೇವಲ ಅಭಿಮಾನದ ಪ್ರದರ್ಶನವಲ್ಲ, ಬದಲಾಗಿ ಇದೊಂದು ರಾಜಕೀಯ ಸಂದೇಶ ಎಂದೇ ಭಾವಿಸಲಾಗುತ್ತಿದೆ. ದಲಿತ ಸಿಎಂ ರೇಸ್‌ನಲ್ಲಿ ನಾನೇನು ಕಮ್ಮಿಯಿಲ್ಲ ಎಂಬುದನ್ನು ಮುನಿಯಪ್ಪ ಪರೋಕ್ಷವಾಗಿ ತಮ್ಮ ಎದುರಾಳಿ ಬಣಕ್ಕೆ ರವಾನಿಸಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.
ಕಾಂಗ್ರೆಸ್‌ಗೆ ಹೊಸ ತಲೆನೋವು
ಈಗಾಗಲೇ ಮುಖ್ಯಮಂತ್ರಿ ಬದಲಾವಣೆ, ಡಿಸಿಎಂ ಹುದ್ದೆ ಸೃಷ್ಟಿ ಸೇರಿದಂತೆ ಹಲವು ಗೊಂದಲಗಳಲ್ಲಿರುವ ಕಾಂಗ್ರೆಸ್ ಹೈಕಮಾಂಡ್‌ಗೆ, ದಲಿತ ನಾಯಕರ ನಡುವಿನ ಈ ಒಳಜಗಳ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರ ಮಟ್ಟದಲ್ಲಿ ನಡೆಯುತ್ತಿರುವ ಈ ಎಡ-ಬಲ ಬಡಿದಾಟ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.








