ತಿರುವನಂತಪುರಂ: ಪಾನೀಯದಲ್ಲಿ ವಿಷ ಬೆರೆಸಿ ಸ್ನೇಹಿತನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೆಯಸಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
ಆರೋಪಿ ಗ್ರೀಷ್ಮಾಗೆ ಈ ಶಿಕ್ಷೆ ವಿಧಿಸಲಾಗಿದೆ. ಆರೋಪಿಯು ತನ್ನ 23 ವರ್ಷದ ಗೆಳೆಯ ಶರೋನ್ ರಾಜ್‌ಗೆ ವಿಷ ನೀಡಿ ಕೊಲೆ ಮಾಡಿದ್ದಳು. ನಂತರ ತಾನೂ ವಿಷ ಸೇವಿಸಿದ್ದಳು. ಆದರೆ, ಆಕೆ ಮಾತ್ರ ಬದುಕುಳಿದಿದ್ದಳು. ಪ್ರಕರಣ ನಡೆದ ಎರಡು ವರ್ಷಗಳ ನಂತರ ಈಗ ಗ್ರೀಷ್ಮಾಗೆ ಶಿಕ್ಷೆ ವಿಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರೀಷ್ಮಾ ಮತ್ತು ಆಕೆಯ ಚಿಕ್ಕಪ್ಪನನ್ನು ಕೋರ್ಟ್ ದೋಷಿಗಳೆಂದು ತೀರ್ಪು ನೀಡಿದೆ. ಆರೋಪಿಗಳ ವಯಸ್ಸನ್ನು ಅಪರಾಧದ ಗಂಭೀರತೆಗಿಂತ ಹೆಚ್ಚಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ. ಈ ಮೂಲಕ ಗ್ರೀಷ್ಮಾ ಕೇರಳದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾದ ಅತ್ಯಂತ ಕಿರಿಯ ಮಹಿಳೆಯಾಗಿದ್ದಾಳೆ.
2022 ರಲ್ಲಿ ಈ ಘಟನೆ ನಡೆದಿತ್ತು. ಕಳೆನಾಶಕ ಬೆರೆಸೆ, ಗ್ರೀಷ್ಮಾ ತನ್ನ ಗೆಳೆಯನಿಗೆ ನೀಡಿದ್ದಳು. 11 ದಿನಗಳ ನಂತರ ಬಹು ಅಂಗಾಂಗ ವೈಫಲ್ಯದಿಂದ ಆತ ಸಾವನ್ನಪ್ಪಿದ್ದ. ತಮಿಳುನಾಡಿನ ಸೇನಾ ಸಿಬ್ಬಂದಿಯೊಂದಿಗೆ ಗ್ರೀಷ್ಮಾಳ ವಿವಾಹ ನಿಶ್ಚಯವಾಗಿತ್ತು. ಆದರೆ, ಆಕೆಯೊಂದಿಗಿನ ಸಂಬಂಧವನ್ನು ಕೊನೆಗೊಳಿಸಲು ಬಾಯ್‌ಫ್ರೆಂಡ್ ನಿರಾಕರಿಸಿದ್ದ. ಹೀಗಾಗಿ ಈ ಕೃತ್ಯ ಎಸಗಿದ್ದಳು ಎನ್ನಲಾಗಿದೆ.








