ಭುವನೇಶ್ವರ: ವ್ಯಕ್ತಿಯೊಬ್ಬ ಇಬ್ಬರು ಗೆಳತಿಯರೊಂದಿಗೆ ಸೇರಿಕೊಂಡು ತನ್ನ ಪತ್ನಿಯನ್ನೇ (Wife) ಕೊಲೆ ಮಾಡಿರುವ ಘಟನೆ ಒಡಿಶಾದ (Odisha) ಭುವನೇಶ್ವರದಲ್ಲಿ ನಡೆದಿದೆ.
ಅನೈತಿಕ ಸಂಬಂಧದ ಬಗ್ಗೆ ಪತ್ನಿಗೆ ಗೊತ್ತಾಗುತ್ತಿದ್ದಂತೆ ಅವರ ಸಹಾಯದಿಂದಲೇ ಪತ್ನಿಯ ಹತ್ಯೆ ಮಾಡಿದ್ದಾನೆ. ಈ ಕುರಿತು ಪೊಲೀಸರು (Police) ಕೊಲೆಯಾದ ಮಹಿಳೆಯ ಪತಿ ಹಾಗೂ ಆತನ ಗೆಳತಿಯರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪ್ರದ್ಯುಮ್ನ ಕುಮಾರ್ ದಾಸ್ ಎಂದು ಗುರುತಿಸಲಾಗಿದೆ.
ಕೊಲೆಯಾದ ಮಹಿಳೆಯನ್ನು ಸುಭಾಶ್ರೀ ಎಂದು ಗುರುತಿಸಲಾಗಿದೆ. ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದಾನೆ. ಆದರೆ, ತನಿಖೆಯಲ್ಲಿ ಎಲ್ಲ ವಿಷಯ ಬಹಿರಂಗವಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಕೈಗಳು ಮತ್ತು ಕುತ್ತಿಗೆಯ ಮೇಲೆ ಪೆಟ್ಟಾಗಿರುವುದು ಬೆಳಕಿಗೆ ಬಂದಿತ್ತು. ಅಲ್ಲದೇ ಮಿತಿಮೀರಿದ ಅನಸ್ತೇಷಿಯಾ ನೀಡಲಾಗಿತ್ತು ಎಂದು ಕೂಡ ತಿಳಿದು ಬಂದಿದೆ.
ಮರಣೋತ್ತರ ಪರೀಕ್ಷೆಯ ಆಧಾರದ ಮೇಲೆ ಮಹಿಳೆಯ ಪತಿಯನ್ನು ವಿಚಾರಣೆ ನಡೆಸಿದಾಗ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಈ ಕುರಿತು ಮೂವರನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ.