murder
ಶ್ರದ್ಧಾ ವಾಕರ್ ಹತ್ಯೆ ಮಾದರಿಯಲ್ಲೇ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ಛತ್ತೀಸ್ಗಢದ ಬಿಲಾಸ್ಪುರ ಜಿಲ್ಲೆಯಲ್ಲಿ ನಡೆದಿದೆ.
ಮೆಡಿಕಲ್ ಸ್ಟೋರ್ ಮಾಲೀಕ ಆಶಿಶ್ ಸಾಹು ಹಣದ ಸಮಸ್ಯೆಯಿಂದ ತನ್ನ ಗೆಳತಿ ಪ್ರಿಯಾಂಕಾಳನ್ನು ಕೊಂದು ತನ್ನ ಮೆಡಿಕಲ್ ಶಾಪ್ ನಲ್ಲಿ ಇಟ್ಟಿದ್ದ ಘಟನೆ ವರದಿಯಾಗಿದೆ
ಆದರೆ ವಾಸನೆ ಬರಲು ಆರಂಭವಾದಾಗ ಮೃತದೇಹವನ್ನು ಬಟ್ಟೆಯೊಂದರಲ್ಲಿ ಸುತ್ತಿ ಕಾರಿನಲ್ಲಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಪೊಲೀಸರ ಪ್ರಕಾರ, ಮೆಡಿಕಲ್ ಸ್ಟೋರ್ ಮಾಲೀಕ ಆಶಿಶ್ ಸಾಹು ಮತ್ತು ಭಿಲಾಯಿ ನಿವಾಸಿ ಪ್ರಿಯಾಂಕಾ ನಡುವೆ ಹಣಕಾಸಿನ ವಿಚಾರವಾಗಿ ಕೆಲ ಸಮಯದಿಂದ ಜಗಳ ನಡೆಯುತ್ತಿತ್ತು. ಪ್ರಿಯಾಂಕಾ ಬಿಲಾಸ್ಪುರದ ಹಾಸ್ಟೆಲ್ ನಲ್ಲಿದ್ದು ರಾಜ್ಯ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು.
ಪರಿಚಿತರಾಗಿದ್ದ ಪ್ರಿಯಾಂಕಾ ಮತ್ತು ಆಶಿಶ್ ಸಾಹು ಒಟ್ಟಿಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರು. ಆದರೆ ಷೇರು ಮಾರುಕಟ್ಟೆಯಲ್ಲಿ ನಷ್ಟವಾದ ನಂತರ ತನ್ನಿಂದ ಪಡೆದಿದ್ದ 11 ಲಕ್ಷ ರೂಪಾಯಿಯನ್ನು ಹಿಂದಿರುಗಿಸುವಂತೆ ಪ್ರಿಯಾಂಕಾ, ಆಶಿಶ್ ಗೆ ಒತ್ತಡ ಹೇರಿದ್ದಳು. ಪ್ರಿಯಾಂಕಾಳನ್ನು ಕೊಂದು ವಿಲೇವಾರಿ ಮಾಡಲು ಸೂಕ್ತ ಸಮಯಕ್ಕಾಗಿ ಆಶಿಶ್ ಕಾಯುತ್ತಿದ್ದ. ಮೃತದೇಹವನ್ನು ಸಾಗಿಸಲು ಪ್ರಯತ್ನಿಸುತ್ತಿದ್ದಾಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.








