ನವದೆಹಲಿ: ದಿನಸಿ ಅಂಗಡಿ ಮಾಲೀಕನೊಬ್ಬ ತನ್ನ ಅಂಗಡಿಯಲ್ಲಿ ಖರೀದಿಸಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ದೆಹಲಿಯ ಶಕುರ್ಪುರದಲ್ಲಿ ತಮ್ಮ ಅಂಗಡಿಯಿಂದ ದಿನಸಿಯನ್ನು ಖರೀದಿಸಲಿಲ್ಲ ಎಂಬ ಕಾರಣಕ್ಕೆ 30 ವರ್ಷದ ವ್ಯಕ್ತಿಯೊಬ್ಬನಿಗೆ ಕಬ್ಬಿಣದ ರಾಡ್ ನಿಂದ ಹೊಡೆದು, ಚಾಕುವಿನಿಂದ ಇರಿದು ಕಿರಾಣಿ ಅಂಗಡಿ ಮಾಲೀಕ ಹಾಗೂ ಪುತ್ರನಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ.
ಮೃತನನ್ನು ವಿಕ್ರಮ್ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿ ಲೋಕೇಶ್ ಗುಪ್ತಾ ಮತ್ತು ಅವರ ಇಬ್ಬರು ಮಕ್ಕಳಾದ ಪ್ರಿಯಾಂಶ್ ಮತ್ತು ಹರ್ಷ್ ಅವರನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಲೋಕೇಶ್ ಗುಪ್ತಾ ದಿನಸಿ ಅಂಗಡಿ ನಡೆಸುತ್ತಿದ್ದಾರೆ. ವಿಕ್ರಮ್ ಅವರ ಕುಟುಂಬದವರು ಗುಪ್ತಾರ ಅಂಗಡಿಯಲ್ಲೇ ದಿನಸಿ ಖರೀದಿಸುತ್ತಿದ್ದರು. ಆದರೆ, ಸುಮಾರು 1 ತಿಂಗಳ ಹಿಂದೆ, ಕುಟುಂಬದವರ ನಡುವೆ ಕೆಲವು ಸಮಸ್ಯೆಗಳಿಂದಾಗಿ ಗುಪ್ತಾ ಅವರ ಅಂಗಡಿಯಿಂದ ಆಹಾರ ಪದಾರ್ಥಗಳನ್ನು ಖರೀದಿಸುವುದನ್ನು ನಿಲ್ಲಿಸಿದ್ದರು. ಇದು ಆರೋಪಿಗಳನ್ನು ಕೆರಳಿಸಿತ್ತು. ಹೀಗಾಗಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.