ಮಂಗಳೂರು:”ಕೊಲೆಗಳು ಆಗುತ್ತಲೇ ಇರುತ್ತವೆ. ಪ್ರತಿಯೊಬ್ಬ ಹತ್ಯೆಗೀಡಾದವರ ಮನೆಗೆ ಸಚಿವರು ಭೇಟಿ ನೀಡಲೇಬೇಕು ಎಂಬುದು ಅರ್ಥವಲ್ಲ. ಏಕೆ ಕೊಲೆ ನಡೆದಿದೆ ಎಂಬುದೂ ಗಮನಿಸಬೇಕಾದ ಅಂಶ,” ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈಚೆಗೆ ಮಂಗಳೂರಿನ ಬಜಪೆ ಬಳಿಯ ಹಿಂದುತ್ವ ಪರ ಕಾರ್ಯಕರ್ತ ಹಾಗೂ ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರು ಭೇಟಿ ನೀಡದ ಕಾರಣ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಸಚಿವರು ಪ್ರತಿಕ್ರಿಯೆ ನೀಡಿದರು.
ಸರ್ಕಾರ ತನ್ನ ಜವಾಬ್ದಾರಿಯನ್ನು ನಿಭಾಯಿಸಿದೆ
“ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಸರ್ಕಾರ ಯಾವುದೇ ತಪ್ಪಿತಸ್ಥರಿಗೆ ರಕ್ಷಣೆ ನೀಡಲ್ಲ. ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿದೆ. ಎನ್‌ಐಎ ತನಿಖೆ ಬೇಕು ಎಂಬ ಬಿಜೆಪಿ ಆರೋಪಗಳಿಗೇಕೆ ಪ್ರತಿಕ್ರಿಯೆ ನೀಡಬೇಕು? ಅವರ ಬಳಿ ನಿಜವಾದ ಮಾಹಿತಿ ಇದ್ರೆ ಸರ್ಕಾರಕ್ಕೆ ನೀಡಲಿ,” ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸಮಾಜ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಕ್ರಮ
“ಕೊಲೆ ಪ್ರಕರಣಗಳ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ನಕಲಿ ಖಾತೆಗಳಿಂದ ಸಮಾಜದಲ್ಲಿ ಗೊಂದಲ ಉಂಟುಮಾಡುತ್ತಿರುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ತಕ್ಷಣವಾಗಿ ಅವರ ಪರಿಚಯ ಗೊತ್ತಾಗದಿದ್ದರೂ, ಸಂಬಂಧಿತ ಸಂಸ್ಥೆಗಳಿಗೆ ಪತ್ರ ಬರೆದು ವಿವರ ಪಡೆದು ಕಾನೂನು ಕ್ರಮ ಜರುಗಿಸಲಾಗುತ್ತದೆ,” ಎಂದು ತಿಳಿಸಿದರು.
ಹರೀಶ್ ಪೂಂಜ ವಿರುದ್ಧ ವ್ಯಂಗ್ಯ
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೀಡಿರುವ ಕೋಮು ಪ್ರಚೋದನಕಾರಿ ಹೇಳಿಕೆಗೆ ಸಂಬಂಧಿಸಿದಂತೆ, ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಸಚಿವರು ಹೇಳಿದರು. “ಅವರ ವೈಯಕ್ತಿಕ ಟೀಕೆಗಳು ಕೀಳುಮಟ್ಟದವು. ಅವರು ಮಾಡಿದ ಟೀಕೆಗಳು ಅವರ ವ್ಯಕ್ತಿತ್ವವನ್ನೇ ತೋರಿಸುತ್ತವೆ. ಅಂತವರಿಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ನನಗೆ ಇಲ್ಲ,” ಎಂದರು.








