ನನಗೆ ಯಾವುದೇ ಜಾತಿಯಿಲ್ಲ.. ನನ್ನದು ರೈತರ ಜಾತಿ : ಮುರುಗೇಶ್ ನಿರಾಣಿ
ಹುಬ್ಬಳ್ಳಿ : ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುವಲ್ಲಿ ನನ್ನದು ಯಾವುದೇ ಸ್ವಾರ್ಥವಿಲ್ಲ ಉದ್ಯೋಗ ಬೇರೆ ರಾಜಕಾರಣ ಬೇರೆ, ನನಗೆ ಯಾವುದೇ ಜಾತಿಯಿಲ್ಲ ನನ್ನದು ರೈತರ ಜಾತಿ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಹುಬ್ಬಳ್ಳಿಯ ಹನ್ನೆರಡು ಮಠದಲ್ಲಿ ನಡೆದ ತಾಲೂಕಿನ ರೈತರ ಸಭೆಯಲ್ಲಿ ಮಾತನಾಡಿದ ನಿರಾಣಿ, ಕಲಘಟಗಿ ತಾಲೂಕಿನ ರೈತರು ಸಹಕಾರ ಕೊಟ್ಟು ಒಪ್ಪುವುದಾದರೆ ಒಂದೂವರೆ ವರ್ಷದಲ್ಲಿ ಕಲಘಟಗಿಯಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡುತ್ತೇನೆ.
ತಾಲೂಕಿನ ರೈತರು ಷೇರು ಸಂಗ್ರಹಿಸಿ ಉಳಿದ ಎಷ್ಟೇ ಹಣ ಖರ್ಚಾದರೂ ನಾನು ಸ್ವಂತ ದುಡ್ಡು ಹಾಕಿ ಸಕ್ಕರೆ ಕಾರ್ಖಾನೆ ಸ್ಥಾಪಿಸುತ್ತೇನೆ.
ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಮಾಡುವುದರಿಂದ ಇಲ್ಲಿನ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಸಾಕಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ಕೊಟ್ಟಂತಾಗುತ್ತದೆ.
12,200 ಎಕರೆ ಕಬ್ಬು ಕಲಘಟಗಿಯಲ್ಲಿ ಬೆಳೆಯುತ್ತಿದೆ ಒಂದು ತಿಂಗಳು ಸಮಯ ತೆಗೆದುಕೊಳ್ಳಿ ಒಂದು ಉತ್ತಮ ನಿರ್ಧಾರಕ್ಕೆ ಬನ್ನಿ ಆದಷ್ಟು ಬೇಗ ಸಕ್ಕರೆ ಕಾರ್ಖಾನೆ ಗುದ್ದಲಿ ಪೂಜೆ ಮಾಡಲು ಮುಂದಾಗೋಣ ಎಂದರು.
ಇನ್ನು ಕಲಘಟಗಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುವಲ್ಲಿ ನನ್ನದು ಯಾವುದೇ ಸ್ವಾರ್ಥವಿಲ್ಲ. ಉದ್ಯೋಗ ಬೇರೆ ರಾಜಕಾರಣ ಬೇರೆ ನನಗೆ ಯಾವುದೇ ಜಾತಿಯಿಲ್ಲ ನನ್ನದು ರೈತರ ಜಾತಿ ನಿಮಗೆ ತಿಳಿದವರಿಗೆ ಮತಹಾಕಿ ಯಾವುದೇ ಪಕ್ಷ ಬೇಧವಿಲ್ಲದೆ ತಾಲೂಕಿನ ರೈತರು ಕಾರ್ಖಾನೆ ಸ್ಥಾಪಿಸುವಲ್ಲಿ ಸರ್ಕಾರದೊಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.