1996ರ ವಿಶ್ವಕಪ್ ಕ್ವಾರ್ಟರ್ ಫೈನಲ್ ಘಟನೆಯನ್ನು ಮತ್ತೊಮ್ಮೆ ನೆನಪಿಸಿಕೊಂಡ ವೆಂಕಿ
ವೆಂಕಟೇಶ್ ಪ್ರಸಾದ್… ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ. ವೆಂಕಿ ಹೆಸರು ಹೇಳಿದ ತಕ್ಷಣ ನೆನಪಾಗೋದೇ ಆ ಒಂದು ಘಟನೆ. ಅದು 1996ರ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯ. ಅದು ಕೂಡ ಬದ್ಧ ವೈರಿ ಪಾಕ್ ವಿರುದ್ಧ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಆ ಒಂದು ಘಟನೆಯನ್ನು ವಿಶ್ವ ಕ್ರಿಕೆಟ್ ಯಾವತ್ತೂ ಮರೆಯುವುದಿಲ್ಲ.
ಈ ಬಗ್ಗೆ ಈಗಾಗಲೇ ಅನೇಕ ಬಾರಿ ಚರ್ಚೆಗಳು ನಡೆದಿವೆ. ಅದೂ ಅಲ್ಲದೆ ಇದು ಸುಮಾರು 24 ವರ್ಷಗಳ ಹಿಂದೆ ನಡೆದಿದ್ದ ಘಟನೆ. ಅಷ್ಟಕ್ಕೂ ಅಲ್ಲಿ ಆಗಿದ್ದು ಇಷ್ಟೇ.. ಪಾಕ್‍ನ ಆರಂಭಿಕ ಅಮೀರ್ ಸೊಹೈಲ್ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದರು. ವೆಂಕಿ ಎಸೆತದಲ್ಲೂ ಬೌಂಡರಿ ಬಾರಿಸಿದ್ದರು. ಅಷ್ಟಕ್ಕೆ ಸುಮ್ಮನಾಗಿರುತ್ತಿದ್ರೆ ವೆಂಕಿಯೂ ತಾಳ್ಮೆ ಕಳೆದುಕೊಳ್ಳುತ್ತಿರಲಿಲ್ಲ. ಚೆಂಡು ಬೌಂಡರಿ ಗೆರೆ ದಾಟುವುದನ್ನು ತನ್ನ ಬ್ಯಾಟ್ ನಿಂದ ಸನ್ನೆ ಮಾಡುತ್ತಾ ಅಮೀರ್ ಸೊಹೈಲ್ ವೆಂಕಿಗೆ ತೋರಿಸಿದ್ದರು. ಇದು ವೆಂಕಿಯ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಆದ್ರೆ ಮರು ಎಸೆತದಲ್ಲೇ ಅಮೀರ್ ಸೊಹೈಲ್‍ಗೆ
ಪೆವಿಲಿಯನ್ ದಾರಿ ತೋರಿಸಿದ್ದ ವೆಂಕಿ ಅಮೀರ್ ಸೊಹೈಲ್‍ನಂತೆ ಕೈ ಸನ್ನೆ ಮಾಡಿ ಸೇಡು ತೀರಿಸಿಕೊಂಡಿದ್ದರು.
ಈ ಘಟನೆಯನ್ನು ವೆಂಕಿ ಇದೀಗ ಮತ್ತೊಮ್ಮೆ ನೆನಪು ಮಾಡಿಕೊಂಡಿದ್ದಾರೆ. ಅದು 1996ರ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯ. ಪಾಕಿಸ್ತಾನ 288 ರನ್‍ಗಳ ಸವಾಲನ್ನು ಬೆನ್ನಟ್ಟುತ್ತಿತ್ತು. ಒಂದು ಹಂತದಲ್ಲಿ ಪಾಕಿಸ್ತಾನ 1 ವಿಕೆಟ್ ಕಳೆದುಕೊಂಡು 14.5 ಓವರ್‍ಗಳಲ್ಲಿ 113 ರನ್ ಗಳಿಸಿತ್ತು. ಆಗಲೇ ಅಮೀರ್ ಸೊಹೈಲ್ ವೆಂಕಿಯನ್ನು ಕೆಣಕಿದ್ದರು. ಆತ ಬೌಂಡರಿ ಹೊಡೆದು ಮತ್ತೆ ಕ್ರಿಸ್‍ಗೆ ಹೋಗಬೇಕಾಗಿತ್ತು.
ಅಷ್ಟರಲ್ಲೇ ಅಲ್ಲಿ ಸ್ವಲ್ಪ ಮಾತಿನ ಚಕಮಕಿಯೂ ನಡೆಯಿತ್ತು. ಆ ಹಂತದಲ್ಲಿ ಆತ ಮಾಡಿದ್ದು ಸರಿ ಅಂತ ಅನ್ನಿಸಿಲ್ಲ. ಇಡೀ ದೇಶ, ಅಪಾರ ಸಂಖ್ಯೆಯ ಪ್ರೇಕ್ಷಕರು ಪಂದ್ಯವನ್ನು ನೋಡ್ತಾ ಇದ್ದರು. ಆ ಕ್ಷಣದಲ್ಲಿ ನನ್ನ ರಕ್ತ ಕುದಿಯುತ್ತಿತ್ತು. ಆಗ ನಮಗೆ ವಿಕೆಟ್ ಬೇಕಾಗಿತ್ತು ಎಂದು ಹೇಳ್ತಾರೆ ವೆಂಕಟೇಶ್ ಪ್ರಸಾದ್.
ಈ ಘಟನೆಯ ವೇಳೆ ನನಗೆ ದಂಡ ವಿಧಿಸುವ ಸಾಧ್ಯತೆ ಇತ್ತು. 1996ರ ವಿಶ್ವಕಪ್ ವೇಳೆಯಲ್ಲಿ ಐಸಿಸಿಯು ಆಟಗಾರರ ನೀತಿ ಸಂಹಿತೆಯನ್ನು ಜಾರಿಗೆ ತಂದಿತ್ತು. ಹೀಗಾಗಿ ನಾನು ಬಹಳ ಎಚ್ಚರಿಕೆಯಿಂದ ಇದೆ. ಆಗ ಡೇವಿಡ್ ಶಫೆರ್ಡ್ ಅಂಪೈರ್ ಆಗಿದ್ದರು. ಅದೇ ಸಮಯದಲ್ಲಿ ಅಜರುದ್ದೀನ್, ಶ್ರೀನಾಥ್ ಮತ್ತು ಸಚಿನ್ ಸೇರಿದಂತೆ ಆಟಗಾರರು ನನ್ನನ್ನು ಪಾರು ಮಾಡಿದ್ದರು. ಇಲ್ಲದೆ ಇದ್ರೆ ನನಗೆ ದಂಡ ವಿಧಿಸಲಾಗುತ್ತಿತ್ತು. ಇಲ್ಲವೇ ನಿಷೇಧಕ್ಕೆ ಗುರಿ ಮಾಡಲಾಗುತ್ತಿತ್ತು ಎಂದು ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.








