ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಅಮೆರಿಕಾದ ವಾಷಿಂಗ್ಟನ್ ಡಿಸಿ ನಗರದಲ್ಲಿ ನಡೆದ ಸಭೆಯಲ್ಲಿ ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ದುಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. ಅವರು ತಾವು ಹಿಂದೂ ಧರ್ಮದ ಕಾರಣದಿಂದ ಪಾಕಿಸ್ತಾನದಲ್ಲಿ ತಾರತಮ್ಯವನ್ನು ಎದುರಿಸಿದ್ದು, ಇದರಿಂದ ತಮ್ಮ ಕ್ರಿಕೆಟ್ ವೃತ್ತಿಜೀವನ ಹಾಳಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನೇರಿಯಾ 2000 ರಿಂದ 2010 ರವರೆಗೆ ಪಾಕಿಸ್ತಾನ ಪರ 61 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು ಅನಿಲ್ ದಳಪತ್ ನಂತರ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ ಎರಡನೇ ಹಿಂದೂ ಕ್ರಿಕೆಟಿಗರಾಗಿದ್ದಾರೆ. ಸಭೆಯಲ್ಲಿ ಮಾತನಾಡಿದ ಕನೇರಿಯಾ, ನಾವು ಸಾಕಷ್ಟು ತಾರತಮ್ಯವನ್ನು ಎದುರಿಸಿದ್ದೇವೆ, ಮತ್ತು ಈಗ ಅದರ ವಿರುದ್ಧ ಮಾತನಾಡಲು ನಮಗೆ ಅವಕಾಶ ಸಿಕ್ಕಿದೆ ಎಂದು ಹೇಳಿದರು.
ಅವರು ಪಾಕಿಸ್ತಾನದಲ್ಲಿ ತಮ್ಮ ಧರ್ಮ ಬದಲಾಯಿಸಲು ಒತ್ತಡ ಎದುರಿಸಿದ್ದಾಗಿ ಹೇಳಿ, ಪಾಕಿಸ್ತಾನದಲ್ಲಿ ನನಗೆ ಸಿಗಬೇಕಾದ ಸಂಪೂರ್ಣ ಗೌರವ ಮತ್ತು ಸಮಾನತೆ ಸಿಗಲಿಲ್ಲ. ಪಾಕಿಸ್ತಾನದಲ್ಲಿ ನಾವು ಎದುರಿಸಿದ ಯಾತನೆಯ ಬಗ್ಗೆ ಅಮೆರಿಕಕ್ಕೆ ಸಾಧ್ಯವಾದಷ್ಟು ತಿಳಿಸಬೇಕು, ಜಾಗೃತಿ ಮೂಡಿಸಬೇಕು ಮತ್ತು ಆಗ ಮಾತ್ರ ಕೆಲವು ಕ್ರಮ ಕೈಗೊಳ್ಳಲು ಅವಕಾಶವಿರುತ್ತದೆ ಎಂದು ಹೇಳಿದರು.
ಈ ಹೇಳಿಕೆಗಳು ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಸ್ಥಿತಿಗತಿಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿವೆ.