ಬೆಂಗಳೂರು: ರಾಜ್ಯ ಸರ್ಕಾರವು ಮಹಿಳಾ ನೌಕರರ ಬಹುದಿನಗಳ ಬೇಡಿಕೆಯಾಗಿದ್ದ ಋತುಚಕ್ರದ ರಜೆಯನ್ನು (Menstrual Leave) ಘೋಷಿಸುವ ಮೂಲಕ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ಕೃತಜ್ಞತೆ ಸಲ್ಲಿಸಲು ನೂರಾರು ಮಹಿಳಾ ನೌಕರರು ನಿನ್ನೆ ವಿಧಾನಸೌಧದ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದರು. ಈ ಅಭಿನಂದನಾ ಸಮಾರಂಭವು ಕೇವಲ ಹೂಗುಚ್ಛ ನೀಡುವ ಕಾರ್ಯಕ್ರಮವಾಗದೇ, ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.
ತವರಿನ ಉಡುಗೊರೆಯಾಗಿ ಬೆಳ್ಳಿ ಕಿರೀಟ ಸ್ವೀಕರಿಸಿದ ಡಿಕೆಶಿ
ಮಹಿಳಾ ನೌಕರರ ಒಕ್ಕೂಟವು ಸರ್ಕಾರದ ಜನಪರ ಕಾಳಜಿಗೆ ಕೃತಜ್ಞತೆ ಸಲ್ಲಿಸಲು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಬೆಳ್ಳಿ ಕಿರೀಟ ತೊಡಿಸಲು ಮುಂದಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಯವಾಗಿಯೇ ಕಿರೀಟವನ್ನು ನಿರಾಕರಿಸಿದರು. ಆದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹಿಳೆಯರ ಪ್ರೀತಿಯ ಒತ್ತಾಯಕ್ಕೆ ಮಣಿದು ಬೆಳ್ಳಿ ಕಿರೀಟವನ್ನು ತಲೆಗೇರಿಸಿಕೊಂಡರು. ಈ ವೇಳೆ ಮಾತನಾಡಿದ ಅವರು, ಮಹಿಳೆಯರು ಪ್ರೀತಿಯಿಂದ ನೀಡಿದ ಈ ಗೌರವವನ್ನು ನಾನು ತವರಿನ ಉಡುಗೊರೆಯಂತೆ ಸ್ವೀಕರಿಸಿದ್ದೇನೆ. ನೀವು ಕಿರೀಟ ತೊಡಿಸಿದಾಗ ನನಗೆ ನನ್ನ ಹೆಣ್ಣುಮಕ್ಕಳ ನೆನಪಾಯಿತು. ನನಗಿಂತ ನನ್ನ ಮಕ್ಕಳು ಬಹಳ ಅಚ್ಚುಕಟ್ಟಾಗಿ ಕೆಲಸ ನಿಭಾಯಿಸುತ್ತಾರೆ. ಹೆಣ್ಣು ಕರುಣೆಯ ತವರು, ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆಯೂ ಒಬ್ಬ ಮಹಿಳೆ ಇರುತ್ತಾರೆ ಎಂದು ಭಾವುಕರಾಗಿ ನುಡಿದರು.
ಇದೇ ಅಧಿವೇಶನದಲ್ಲಿ ಕಾನೂನು ಜಾರಿ
ಮಹಿಳಾ ನೌಕರರಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ, ಕೇವಲ ಆದೇಶ ಹೊರಡಿಸುವುದಷ್ಟೇ ಅಲ್ಲ, ಈ ಋತುಚಕ್ರದ ರಜೆಯನ್ನು ಕಾನೂನಾತ್ಮಕವಾಗಿ ಭದ್ರಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಘೋಷಿಸಿದರು. ಇದೇ ಅಧಿವೇಶನದಲ್ಲಿ ಈ ಕುರಿತು ಮಸೂದೆಯನ್ನು ಮಂಡಿಸಿ ಕಾನೂನು ರೂಪಿಸಲು ನಾವು ತೀರ್ಮಾನಿಸಿದ್ದೇವೆ. ಈ ಬಗ್ಗೆ ಈಗಾಗಲೇ ಕಾನೂನು ಸಚಿವರೊಂದಿಗೆ ಚರ್ಚಿಸಲಾಗಿದ್ದು, ಅವರು ಭರವಸೆ ನೀಡಿದ್ದಾರೆ. ಇದು ಮಹಿಳಾ ನೌಕರರ ಹಕ್ಕು ಮತ್ತು ಆರೋಗ್ಯದ ದೃಷ್ಟಿಯಿಂದ ಕ್ರಾಂತಿಕಾರಿ ನಡೆಯಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ದೂರು ಪೆಟ್ಟಿಗೆ ಆಗಬೇಡಿ, ಶಕ್ತಿಯಾಗಿ ಬೆಳೆಯಿರಿ
ಮಹಿಳಾ ನೌಕರರನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿ, ಮಹಿಳೆಯರು ಕೇವಲ ಸಮಸ್ಯೆಗಳನ್ನು ಹೇಳಿಕೊಳ್ಳುವ ಕಂಪ್ಲೇಂಟ್ ಬಾಕ್ಸ್ (Complaint Box) ಗಳಾಗಬಾರದು. ಬದಲಿಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮತ್ತು ಹೋರಾಟ ಮಾಡುವ ಶಕ್ತಿಯಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು. ಸಂಘಟನೆ ಬಹಳ ಮುಖ್ಯ, ಆದರೆ ಆ ಸಂಘಟನೆ ಜಾತಿಯ ಆಧಾರದ ಮೇಲೆ ಇರಬಾರದು. ಒಕ್ಕಲಿಗರು, ಲಿಂಗಾಯತರು ಅಥವಾ ಹಿಂದುಳಿದ ವರ್ಗದವರೆಂದು ಪ್ರತ್ಯೇಕ ಸಂಘಗಳನ್ನು ಕಟ್ಟಿಕೊಳ್ಳಬೇಡಿ. ಮಹಿಳೆ ಎಂಬ ಒಂದೇ ಜಾತಿಯಡಿಯಲ್ಲಿ ನಾವೆಲ್ಲರೂ ಒಂದಾಗಿರಬೇಕು. ಆಗ ಮಾತ್ರ ನಿಮ್ಮ ಧ್ವನಿಗೆ ಸರ್ಕಾರ ಮತ್ತು ಸಮಾಜ ಮನ್ನಣೆ ನೀಡುತ್ತದೆ ಎಂದು ಕಿವಿಮಾತು ಹೇಳಿದರು.
ಗ್ಯಾರಂಟಿ ಯೋಜನೆಗಳೇ ನಮ್ಮ ಬದ್ಧತೆಗೆ ಸಾಕ್ಷಿ
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಲ್ಲಿ ಸಿಂಹಪಾಲು ಮಹಿಳೆಯರಿಗೇ ಮೀಸಲಾಗಿದೆ. ಗೃಹಲಕ್ಷ್ಮಿ, ಶಕ್ತಿ ಯೋಜನೆ ಮತ್ತು ಗೃಹಜ್ಯೋತಿಯಂತಹ ಯೋಜನೆಗಳು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬುನಾದಿ ಹಾಕಿವೆ. ನೀವು ಉಪಕಾರ ಸ್ಮರಣೆ ಇರುವವರು ಎಂಬುದು ಇಂದಿನ ನಿಮ್ಮ ಈ ಅಭಿಮಾನದಿಂದ ಸಾಬೀತಾಗಿದೆ. ಸರ್ಕಾರ ಸದಾ ನಿಮ್ಮ ಪರವಾಗಿರಲಿದ್ದು, ಮಹಿಳಾ ನೌಕರರು ತಮ್ಮ ವೃತ್ತಿ ಜೀವನದ ಜೊತೆಗೆ ನಾಯಕತ್ವ ಗುಣಗಳನ್ನೂ ಮೈಗೂಡಿಸಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಫೂರ್ತಿದಾಯಕ ಮಾತುಗಳನ್ನಾಡಿದರು.








