ಜನರ ಜೀವ ರಕ್ಷಣೆಯೇ ನನ್ನ ಮೊದಲ ಆದ್ಯತೆ- ವಸತಿ ಸಚಿವ ವಿ.ಸೋಮಣ್ಣ
ಬೆಂಗಳೂರು: ಸ್ವಕ್ಷೇತ್ರ ಗೋವಿಂದರಾಜನಗರದ ಹೆಚ್ಚಿನ ಪ್ರದೇಶಗಳಲ್ಲಿ ಹೈ ಟೆನ್ಷನ್ ವಿದ್ಯುತ್ ತಂತಿಗಳು ಹಾದುಹೋಗಿದ್ದವು. ಇದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದರು. ಇದನ್ನು ಮನಗಂಡ ಬಳಿಕ ಹೈ ಟೆನ್ಷನ್ ತಂತಿಗಳನ್ನು ಭೂಗತ ಕೇಬಲ್ ಆಗಿ ಪರಿವರ್ತಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇನೆ. ಈ ಮೂಲಕ ಜನತೆಯ ಜೀವ ರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದು ವಸತಿ ಮತ್ತು ಮೂಲಸೌಲಭ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಹಾದು ಹೋಗಿರುವ ಹೈ ಟೆನ್ಷನ್ ವಿದ್ಯುತ್ ತಂತಿಗಳನ್ನು ಭೂಗತ ಕೇಬಲ್ ಆಗಿ ಪರಿವರ್ತಿಸುವ ಕಾಮಗಾರಿಯ ಪೂಜೆ ನೆರವೇರಿಸಿ ಮಾತನಾಡಿದ ಅವರು, 66ಕೆ.ವಿ.ಹೈಟೆನ್ಷನ್ ವಿದ್ಯುತ್ ತಂತಿಗಳು ಗೋವಿಂದರಾಜನಗರ ವಿಧಾನಸಭಾ ಬಹುತೇಕ ಪ್ರದೇಶದಲ್ಲಿ ಹಾದುಹೋಗಿದ್ದವು. ಹೈಟೆನ್ಷನ್ ವಿದ್ಯುತ್ ತಂತಿಗಳು ಹಾದು ಹೋಗಿರುವ ಕಡೆಗಳಲ್ಲಿ ಸಾವಿರಾರು ಕುಟುಂಬಗಳು ವಾಸ ಮಾಡುತ್ತಿದ್ದವು .ಈ ಕುಟುಂಬಗಳು ಸದಾ ಆತಂಕದಲ್ಲಿ ಕಾಲ ದೂಡುವ ಪರಿಸ್ಥಿತಿ ಎದುರಾಗಿತ್ತು. ಅಲ್ಲದೇ, ವಿದ್ಯುತ್ ಪ್ರವಹಿಸಿ ಹಲವಾರು ಜನರು ಪ್ರಾಣಕಳೆದುಕೊಂಡಿದ್ದರು. ಪಾರ್ಕ್, ಸ್ಟೇಡಿಯಂ, ಶಾಲೆಗಳು ಸೇರಿದಂತೆ ಹೆಚ್ ಟಿ ತಂತಿಗಳು ಹಾದು ಹೋದ ಕಡೆಗಳಲ್ಲೆಲ್ಲ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸುಮಾರು 5.5 ಕಿ. ಮೀ ಉದ್ದದ ಎಚ್ಟಿ ಲೈನ್ ಅನ್ನು 7.5 ಕಿ ಮೀ ಭೂಗತ ಕೇಬಲ್ ಆಗಿ ಬದಲಾಯಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಯಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ರಾಜಾಜಿನಗರ 6 ನೇ ಬ್ಲಾಕ್, ಕೈಗಾರಿಕಾ ಪ್ರದೇಶ, ಮಾರೇನಹಳ್ಳಿ, ಎಂ ಸಿ ಬಡಾವಣೆ, ಡಾ.ಬಿ.ಆರ್.ಅಂಬೇಡ್ಕರ್ ಸ್ಟೇಡಿಯಂ, ಮಾರುತಿ ಮಂದಿರ, ಅಗ್ರಹಾರ ದಾಸರಹಳ್ಳಿ, ಗೋವಿಂದರಾಜನಗರ, ಬಿಆರ್ವಿ ಕಾಲೋನಿ, ಚಂದ್ರಾ ಬಡಾವಣೆ, ಗಂಗೊಂಡನಹಳ್ಳಿಯಲ್ಲಿ ಸಾವಿರಾರು ಕುಟುಂಬಗಳು ನೆಮ್ಮದಿಯ ನಿಟ್ಟುದಿರು ಬಿಡಬಹುದು. 126 ಕೋಟಿ ರೂ. ವೆಚ್ಚದಲ್ಲಿ ನಡೆಯಲಿರುವ ಈ ಕಾಮಗಾರಿ ಕೆಲವೇ ತಿಂಗಳುಗಳಲ್ಲಿ ಪೂರ್ಣವಾಗಲಿದೆ ಎಂದು ಸಚಿವರು ಹೇಳಿದ್ದಾರೆ.
ಇನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಮಾನ್ಯ ಸಚಿವರು ಒಂದಿಲ್ಲೊಂದು ಜನಪರ ಯೋಜನೆಯನ್ನು ಜಾರಿಗೆ ತರುತ್ತಲೇ ಇರುತ್ತಾರೆ. ಸದಾ ಕ್ರಿಯಾಶೀಲ, ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುವ ಸಚಿವ ಶ್ರೀ ವಿ.ಸೋಮಣ್ಣ ಅವರ ಇಚ್ಛಾಶಕ್ತಿಯಿಂದ ಮಾತ್ರ ಇಂಥ ಯೋಜನೆಗಳು ಸಾಧ್ಯ. ಹೈಟೆನ್ಷನ್ ವಿದ್ಯುತ್ ತಂತಿಗಳಿಂದ ಸಾಕಷ್ಟು ಜನ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಚಿವರು ಉತ್ತಮ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದಾರೆ. ಜನರ ಜೀವ ರಕ್ಷಣೆಯ ಜೊತೆಯಲ್ಲಿ ಕ್ಷೇತ್ರದ ಸೌಂದರ್ಯ ಸಹ ಇದರಿಂದ ಹೆಚ್ಚಲಿದೆ. ಸಚಿವ ವಿ.ಸೋಮಣ್ಣನವರ ಅಭಿವೃದ್ಧಿ ಪರ ಚಿಂತನೆಯಿಂದಲೇ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಕಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮುಖಂಡ ಡಾ.ಅರುಣ್ ಸೋಮಣ್ಣ, ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಸೋಮಶೇಖರ್ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.









