ಮೈಸೂರು: ವಿಶ್ವವಿಖ್ಯಾತ ಜಂಬೂ ಸವಾರಿ (Jamboo Savari)ಗೆ ಇಡೀ ಮೈಸೂರು ಸಜ್ಜಾಗಿ ನಿಂತಿದೆ. ಜಂಬೂ ಸವಾರಿ ಮೆರವಣಿಗೆಗೆ ಪೊಲೀಸ್ ಇಲಾಖೆಯಿಂದ (Police Department) ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ (Seema Latkar) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮೆರವಣಿಗೆ ಎದುರು ಜಂಬೂ ಸವಾರಿ ಮೆರವಣಿಗೆಯ ಪುಷ್ಪಾರ್ಚನೆ ರಿಹರ್ಸಲ್ ನಡೆದಿದೆ. ಅಂತಿಮ ಹಂತದ ರಿಹರ್ಸಲ್‌ನಲ್ಲಿ ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ, ಅಶ್ವರೋಹಿ ದಳ, ಪೊಲೀಸ್ ಇಲಾಖೆಯ ಎಂಟು ತುಕಡಿಗಳು ಭಾಗಿಯಾಗಿವೆ. ಹಬಬ್ದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಲ್ಲದೇ, ಎರಡು ಹಂತದ ಭದ್ರತೆ ಕೈಗೊಳ್ಳಲಾಗಿದೆ.
ಮೈಸೂರು ಮಾತ್ರವಲ್ಲದೇ, ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು 4 ಸಾವಿರಕ್ಕೂ ಅಧಿಕ ಪೊಲೀಸರು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಮಫ್ತಿಯಲ್ಲಿನ ಪೊಲೀಸರು ನಿಗಾ ಇಟ್ಟಿರುತ್ತಾರೆ. ಜನನಿಬಿಡ ಸ್ಥಳದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.