ಬೆಂಗಳೂರು : ಮೈಶುಗರ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಬಾರದು. ಸರ್ಕಾರವೇ ಒಂದಿಷ್ಟು ಬಂಡವಾಳವನ್ನು ನೀಡಿ ಕಾರ್ಖಾನೆಯನ್ನು ಆಧುನಿಕರಣ ಮಾಡಿ ಇನ್ನಷ್ಟು ಶಕ್ತಗೊಳಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದ ಮಾಜಿ ಸಿಎಂ ಸಿದ್ದರಾಮಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ವಿಶೇಷ ಆಸಕ್ತಿಯಿಂದಾಗಿ 1933 ರಲ್ಲಿ ಮೈಸೂರು ಸಕ್ಕರೆ ಕಾರ್ಖಾನೆಯು ಆರಂಭಗೊಂಡಿತು. ಮುಂದೆ ಇದನ್ನು ಮೈಶುಗರ್ ಕಾರ್ಖಾನೆ ಎಂದು ಕರೆಯಲಾಯಿತು.
ಕರ್ನಾಟಕದ ಮೊಟ್ಟಮೊದಲ ಏಕೈಕ ಸರ್ಕಾರಿ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
ಕಾರ್ಖಾನೆಯು ಹಳೇ ಮೈಸೂರು ಭಾಗದ ಕಬ್ಬು ಬೆಳೆಗಾರರ ಬದುಕನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಸುಧಾರಿಸಿತು.
ಇದರಲ್ಲಿ ಸುಮಾರು 14,046 ರೈತರು ಷೇರುದಾರರಾಗಿರುತ್ತಾರೆ. ಪ್ರತಿನಿತ್ಯ ಸುಮಾರು 5000 ಟನ್ ಕಬ್ಬು ಅರೆಯುವ ಸಾಮರ್ಥ್ಯ ಈ ಕಾರ್ಖಾನೆಗಿದೆ. ಹಿಂದೆ ವಾರ್ಷಿಕ 9.00 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಈ ಕಾರ್ಖಾನೆ ಅರೆಯುತ್ತಿತ್ತು. ಮಂಡ್ಯ ಜಿಲ್ಲೆಯೊಂದರಲ್ಲೇ ಸುಮಾರು 83,831 ಎಕರೆ ಪ್ರದೇಶದಲ್ಲಿ 35 ಲಕ್ಷ ಮೆಟ್ರಿಕ್ ಟನ್‌ಗಳಿಗೂ ಹೆಚ್ಚು ಕಬ್ಬನ್ನು ರೈತರು ಬೆಳೆಯುತ್ತಾರೆ.
ಇದಲ್ಲದೇ ಅಕ್ಕಪಕ್ಕದ ಜಿಲ್ಲೆಗಳಲ್ಲು ಅಪಾರ ಪ್ರಮಾಣದ ಕಬ್ಬನ್ನು ಬೆಳೆಯುತ್ತಾರೆ. ಕಾರ್ಖಾನೆಯು ಕೋ-ಜನರೇಷನ್, ಡಿಸ್ಟಿಲರಿ, ಗೂಕೋಸ್, ಚಾಕೇಟ್ ಮತ್ತು ಎಥೆನಾಲ್‌ನಂತಹ ಉತ್ಪನ್ನಗಳನ್ನು ನಿರಂತರ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. ಈ ಕಂಪೆನಿ ಶೇಕಡ 20 ರಿಂದ 30 ಪೇರು ಡಿವಿಡೆಂಟ್ ಅನ್ನು 18 ವರ್ಷಕ್ಕೂ ಹೆಚ್ಚು ಕಾಲ ನೀಡಿರುವ ಹೆಗ್ಗಳಿಕೆಯ ಇತಿಹಾಸ ಹೊಂದಿದೆ. 14ಕ್ಕೂ ಹೆಚ್ಚು ಫರ್ಮ್‌ಗಳು, ವಿದ್ಯಾಸಂಸ್ಥೆಗಳು ಮತ್ತು ರೈತ ಸಮುದಾಯ ಭವನಗಳನ್ನು ಹೊಂದಿರುವ ಈ ಕಂಪನಿಯು ಮಂಡ್ಯ ಜಿಲ್ಲೆಯೊಂದರಲ್ಲೇ ಸುಮಾರು 207 ಎಕರೆಗಿಂತ ಹೆಚ್ಚು ಭೂಮಿಯನ್ನು ಹೊಂದಿದೆ.
ರೈತರ ಬದುಕನ್ನು ಸುಧಾರಿಸಿ ಮಂಡ್ಯದಂತಹ ನಗರ ಪಟ್ಟಣಗಳು ರೂಪುಗೊಳ್ಳುವಲ್ಲಿ ಈ ಕಾರ್ಖಾನೆಯ
ಪಾತ್ರ ಮಹತ್ವದ್ದು. ಹಳೇ ಮೈಸೂರು ಭಾಗದ ಇಂತಹ ದೀರ್ಘ ಇತಿಹಾಸವುಳ್ಳ ಮೈಸೂರು ಶುಗರ್ ಕಂಪನಿಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವುದು ದುರಾದೃಷ್ಟಕರ ಸಂಗತಿ. ಇದು ಸರಿಯಾದ ಕ್ರಮವಲ್ಲ. ಈ ಹಿಂದೆ 2013 ರಿಂದ 18-19 ರವರೆಗೆ ಸುಮಾರು 229,65 ಕೋಟಿ ರೂ.ಗಳನ್ನು ನೀಡಿ
ಈ ಕಂಪನಿಯನ್ನು ಪುನಶ್ವೇತನಗೊಳಿಸಲು ಪ್ರಯತ್ನಿಸಲಾಗಿತ್ತು.
ಸಾವಿರಾರು ಕೋಟಿ ಮೌಲ್ಯವುಳ್ಳ ಈ ಕಂಪನಿಯನ್ನು ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಬಾರದು. ಸರ್ಕಾರವೇ ಒಂದಿಷ್ಟು ಬಂಡವಾಳವನ್ನು ನೀಡಿ ಕಾರ್ಖಾನೆಯನ್ನು ಆಧುನಿಕರಣ ಮಾಡಿ ಇನ್ನಷ್ಟು ಶಕ್ತಗೊಳಿಸಬೇಕು. ಈ ಮೂಲಕ ಕಬ್ಬು ಅರೆಯುವ ಸಾಮರ್ಥ್ಯವನ್ನು ಹೆಚ್ಚು ಮಾಡಿ, ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಮತ್ತು ಹಳೆ ಮೈಸೂರು ಭಾಗದ ಕಬ್ಬು ಬೆಳೆಗಾರರನ್ನು ಸಂರಕ್ಷಿಸಬೇಕು ಮತ್ತು ಸಕ್ಕರೆ ಉತ್ಪಾದನೆಯ ದೀರ್ಘ ಇತಿಹಾಸವಿರುವ ಮಂಡ್ಯ ಜಿಲ್ಲೆಯ ಆರ್ಥಿಕತೆಯನ್ನು ಪುನಶ್ವೇತನಗೊಳಿಸಬೇಕೆಂದು ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.








