Mysuru : ಮಹಿಳೆಯ ಕಣ್ಣಿನಿಂದ ಹೊರಬರುತ್ತಿವೆ ಕಲ್ಲಿನ ಚೂರುಗಳು…
ಮೈಸೂರು : ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿ ಬೆಂಕಿಪುರ ಗ್ರಾಮದ ಮಹಿಳೆಯೊಬ್ಬರಿಗೆ ಕಣ್ಣಿನಿಂದ ಕಲ್ಲಿನಂತಹ ಚೂರುಗಳು ಹೊರ ಬರುತ್ತಿವೆ. ಇದರಿಂದ ಮಹಿಳೆ ಸೂರ್ಯನ ಬೆಳಕೂ ನೋಡದಂಥಹ ಪರಿಸ್ಥಿತಿ ಎದುರಾಗಿದೆ.
ಬೆಂಕಿಪುರ ಗ್ರಾಮದ 35 ವರ್ಷದ ವಿಜಯ ಎಂಬವರ ಎರಡೂ ಕಣ್ಣಿನಿಂದ ಕಳೆದೊಂದು ವಾರದಿಂದ ಕಲ್ಲಿನ ಚೂರುಗಳು ಹೊರಬರುತ್ತಿವೆ. “ರಾತ್ರಿ ಮಲಗಿ ಬೆಳಗ್ಗೆ ಏಳುವಾಗ ಕಣ್ಣು ನೋವಿನಿಂದ ಕೆಂಪಾಗಿ ಹೋಗಿರುತ್ತಿವೆ. ಸೂರ್ಯಯ ಬೆಳಕು ನೋಡಲು ಆಗದ ಪರಿಸ್ಥಿತಿ ಕೆಲಕಾಲ ಇರುತ್ತದೆ. ನಂತರ ಅರ್ಧಗಂಟೆಗೊಂದರಂತೆ ಕಣ್ಣಿನಿಂದ ಕಲ್ಲುಗಳು ಹೊರಬರುತ್ತವೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜರೀನಾ ತಾಜ್ ವಿಜಯ ಅವರ ಮನೆಗೆ ಬೇಟಿ ನೀಡಿದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಜರೀನಾ ತಾಜ್, ವಿಜಯ ಅವರನ್ನು ಚಲ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ತೋರಿಸಿದ್ದಾರೆ. ಅಲ್ಲಿನ ವೈದ್ಯರು ಕೆ ಆರ್ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ.
ಕಣ್ಣಿಗೆ ಸೋಂಕು ತಗುಲಿದಾಗ ಕಣ್ಣಿನಿಂದ ಈ ರೀತಿಯಾದ ಗಟ್ಟಿಪದಾರ್ಥ ಹೊರಬರುತ್ತದೆ. ಸೋಂಕು ನಿವಾರಣೆಗೆ ಚಿಕಿತ್ಸೆ ನೀಡಬಹುದಾಗಿದ್ದು, ಗಾಬರಿಯಾಗಬೇಕಾದ ಅವಶ್ಯಕತೆ ಇಲ್ಲವೆಂದು ಕೆ ಆರ್ ಆಸ್ಪತ್ರೆಯ ನೇತ್ರ ತಜ್ಞೆ ಡಾ. ಲತಾ ತಿಳಿಸಿದ್ದಾರೆ.
Mysuru: Stone shards coming out of woman’s eye…








