ಎನ್ ಎಂಪಿಟಿ ಬೋಟ್ ದುರಂತ ; ರಕ್ಷಣೆಗಾಗಿ ಅಂಗಲಾಚುತ್ತಿರುವ 9 ಕಾರ್ಮಿಕರು
ಉಡುಪಿ : ಚಂಡಮಾರುತದ ಹಿನ್ನೆಲೆಯಲ್ಲಿ ಕಳೆದ ಮೂರು ದಿನದಿಂದ ಸಮುದ್ರದಲ್ಲೇ ಸಿಲುಕಿಕೊಂಡಿರುವ ಎನ್ ಎಂಪಿಟಿಯ ಕೋರಮಂಡಲ ಎಕ್ಸ್ ಪ್ರೆಸ್ ಟಗ್ ನ 9 ಮಂದಿ ಸಿಬ್ಬಂದಿ ರಕ್ಷಣೆ ಮಾಡುವಂತೆ ಅಂಗಲಾಚುತ್ತಿದ್ದಾರೆ.
ಶುಕ್ರವಾರ ಬೆಳಗ್ಗೆ 11.30 ರಿಂದ ಕಡಲಲ್ಲಿ ತೇಲುತ್ತಿರುವ ಕೋರಮಂಡಲ ಎಕ್ಸ್ ಪ್ರೆಸ್ ಟಗ್, ಶನಿವಾರ ಬೆಳಗ್ಗೆ 8.30ಕ್ಕೆ ಕಾಪು ಲೈಟ್ ಹೌಸ್ ಬಳಿಯಿಂದ ಸುಮಾರು ಹದಿನೈದು ಕಿಲೋ ಮೀಟರ್ ದೂರದ ಕಾಪು ಪಾರ್ ಬಳಿ ಬಂಡೆಗೆ ಡಿಕ್ಕಿ ಹೊಡೆದು ನಿಂತಿರುವುದು ಪತ್ತೆಯಾಗಿದೆ.
ಈ ನಡುವೆ ಟಗ್ ನಲ್ಲಿರುವ ಸಿಬ್ಬಂದಿ ಅಪಾಯದಲ್ಲಿರುವ ಸ್ಥಿತಿ ವಿವರಿಸುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ನಮ್ಮಲ್ಲಿರುವ ಆಹಾರ, ನೀರು ಖಾಲಿಯಾಗುತ್ತಿದೆ. ಸಮುದ್ರದ ನಡುವೆ ಪ್ರಾಣಭಯ ಕಾಡುತ್ತಿದೆ. ಕೂಡಲೇ 9 ಜನರನ್ನು ರಕ್ಷಣೆ ಮಾಡಿ ಎಂದು ಸಿಬ್ಬಂದಿ ಅಂಗಲಾಚುತ್ತಿದ್ದಾರೆ.










