ಭರತನಹಳ್ಳಿ ಅಬ್ಬೇ ಹೋಗಿ ವರ್ಷ ಕಳೆದಿರಲಿಲ್ಲ ಈಗ ನಾ.ಸು ಭರತನಹಳ್ಳಿ ಮಾಸ್ತರ್ ಸಹ ಅವರ ಹಿಂದೆಯೇ ಹೋರಟರು; ವೈಕುಂಠ ಏಕಾದಶಿಯಂದು ದೇಹತ್ಯಾಗಗೈದ ನಾ.ಸು.ಭ Marjala manthana Bharathanahalli master
ಮಾಧ್ಯಮರಂಗ, ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಆರು ದಶಕಗಳಿಂದ ಕ್ರಿಯಾಶೀಲರಾಗಿದ್ದ ಹಿರಿಯ ಸಾಹಿತಿ ಅಂಕಣಕಾರ ಹಾಗೂ ಪತ್ರಕರ್ತ ನಾ.ಸು.ಭರತನಹಳ್ಳಿ ವೈಕುಂಠ ಏಕಾದಶಿಯಂದೇ ಸ್ವಗಸ್ಥರಾಗಿದ್ದಾರೆ. ಪ್ರಖರ ಆಧ್ಯಾತ್ಮ ಚಿಂತಕರೂ ಆಗಿದ್ದ 84 ವರ್ಷದ ಭರತನಹಳ್ಳಿ ಮೇಸ್ಟ್ರು ಇಂದು ಶುಕ್ರವಾರದ ದಿನ ವೈಕುಂಠವಾಸಿಗಳಾಗಿದ್ದಾರೆ. ಇದು ಉತ್ತರಕನ್ನಡ ಜಿಲ್ಲೆಯ ಸಾಂಸ್ಕೃತಿಕ ವಲಯಕ್ಕೆ ಆದ ಬಹು ದೊಡ್ಡ ನಷ್ಟ. ಇತ್ತೀಚೆಗಷ್ಟೆ ಪತ್ನಿಯನ್ನು ಕಳೆದುಕೊಂಡಿದ್ದ ನಾ.ಸು ಭರತನಹಳ್ಳಿ ಇಂದು ಇಹಲೋಕದ ವ್ಯಾಪಾರ ಮುಗಿಸಿಬಿಟ್ಟರು. Marjala manthana Bharathanahalli master
ಯಲ್ಲಾಪುರ ತಾಲೂಕಿನ ಭರತನಹಳ್ಳಿಯ ನಿವಾಸಿ ನಾ.ಸು.ಭ ಕೇವಲ ಸಾಹಿತಿ, ಪತ್ರಕರ್ತ ಮಾತ್ರವಲ್ಲದೇ ಪ್ರಕಾಶಕರಾಗಿಯೂ 60 ವರ್ಷಗಳಿಗಿಂತ ಹೆಚ್ಚು ವರ್ಷ ಸಾಹಿತ್ಯದ ಸೇವೆ ಮಾಡಿದವರು. ಸ್ವರ್ಣವಲ್ಲಿ ಶ್ರೀಗಳ ಮಾರ್ಗದರ್ಶನದ ಸ್ವರ್ಣವಲ್ಲೀ ಪ್ರಭಾ ಸಂಪಾದಕರಾಗಿ ಸುದೀರ್ಘ 21 ವರ್ಷ ಪತ್ರಿಕೆ ಮುನ್ನಡೆಸಿದ ಹೆಗ್ಗಳಿಕೆ ಅವರದ್ದು. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಅವರು ಕೈಯಾಡಿಸಿದವರು. ಕಥೆ, ಕಾದಂಬರಿ, ಕವನ, ಪ್ರವಾಸಿ ಕಥನ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ, ಅಂಕಣ ಬರಹ ಸೇರಿದಂತೆ 26 ಕ್ಕೂ ಹೆಚ್ಚು ಪುಸ್ತಕಗಳನ್ನು ನಾ.ಸು.ಭ ಬರೆದಿದ್ದಾರೆ. ವಿಚಾರ-ವಿಮರ್ಶೆ ಲೇಖನಗಳಂತಹ ಗಂಭೀರ ಸಾಹಿತ್ಯದ 16 ಪುಸ್ತಕಗಳೂ ನಾ.ಸು ಅವರ ಲೇಖನಿಯಿಂದ ರಚಿತವಾಗಲ್ಪಟ್ಟಿದೆ.
ಪ್ರತಿಷ್ಟಿತ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ವರದಿಗಾರರಾಗಿ, ಹಲವು ಪತ್ರಿಕೆಗಳಿಗೆ ಅಂಕಣಕಾರರಾಗಿ, ಆಕಾಶವಾಣಿಯ ಭಾಷಣಕಾರರಾಗಿ, ಮಾಧ್ಯಮ ಮತ್ತು ಸಾಂಸ್ಕೃತಿಕ ಕ್ಷೇತ್ರದ ಕೃಷಿ ಮಾಡಿದವರು ನಾ.ಸು ಮಾಸ್ತರ್. ಸನ್ಮತಿ ಎಂಬುವುದು ಅವರ ಜೀವನದ ಮಹತ್ವದ ಸಾಧನೆಯನ್ನು ಪ್ರಸ್ತುತ ಪಡಿಸುವ ಅಭಿನಂದನಾ ಗ್ರಂಥ. ಪ್ರೊಫೆಸರ್ ಜಿ.ಟಿ ಭಟ್ಟ ಹಾಸಣಗಿಯವರು ಅವ್ಯಾಹ ಪ್ರೀತಿ ಎನ್ನುವ ನಾ.ಸು ಭರತಹಳ್ಳಿವರ ಕುರಿತಾದ ಆಪ್ತ ಬರಹಗಳ ಪುಸ್ತಕವನ್ನು ಬರೆದಿದ್ದಾರೆ. ನಾ.ಸು.ಭ ಅವರು ಸಿದ್ಧಾಪುರದಲ್ಲಿ ನಡೆದಿದ್ದ 14ನೇ ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದರು.
ಮಾಧ್ಯಮ ಅಕಾಡೆಮಿ, ಕರ್ನಾಟಕ ಶ್ರೀ, ಕಯ್ಯಾರ ಕಿಂಞಣ್ಣ ರೈ ಪ್ರಶಸ್ತಿ, ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿಯ ಗ್ರಂಥ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ಸುವರ್ಣ ಗೌರವ ಸೇರಿದಂತೆ ಹತ್ತು ಹಲವು ಗೌರವಗಳು ನಾ.ಸು ಭರತನಹಳ್ಳಿಯವರನ್ನು ಅರಸಿಕೊಂಡು ಬಂದಿತ್ತು. ಇತ್ತೀಚೆಗೆ ಖ್ಯಾತ ಪತ್ರಕರ್ತ ರವಿ ಬೆಳಗೆರೆಯವರ ದೇಹಾಂತ್ಯವಾದ ಸಂಧರ್ಭದಲ್ಲಿ ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡು ಮಗುವಿನಂತೆ ಅತ್ತಿದ್ದ ಸ್ನೇಹಜೀವಿ ಅವರು. ಸರಳ, ಸಜ್ಜನ, ಸ್ನೇಹಮಯಿ ವ್ಯಕ್ತಿತ್ವದ ವಿದ್ವಾಂಸ ನಾ.ಸು ಭ ತಮ್ಮ ಅಪಾರ ಆತ್ಮೀಯರನ್ನು ಅಭಿಮಾನಿಗಳನ್ನು ಅಗಲಿದ್ದಾರೆ.
-ವಿಭಾ (ವಿಶ್ವಾಸ್ ಭಾರದ್ವಾಜ್)
ಮಾರ್ಜಾಲ ಮಂಥನ ಕಾಲಂ
ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel