ನಟ ನಾಗ ಶೌರ್ಯ ಫಾರಂ ಹೌಸ್ ಮೇಲೆ ಪೊಲೀಸರಿಂದ ದಾಳಿ : 66 ಲಕ್ಷ ನಗದು ವಶ , 30 ಮಂದಿ ಅರೆಸ್ಟ್
ತೆಲುಗಿನ ಖ್ಯಾತ ನಟ ನಾಗ ಶೌರ್ಯನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಭಾರೀ ನಗದು ವಶಕ್ಕೆ ಪಡೆದಿದ್ದು, 30 ಮಂದಿಯನ್ನ ಬಂಧಿಸಿರೋದಾಗಿ ತಿಳಿದುಬಂದಿದೆ. ನಾಗ ಶೌರ್ಯಗೆ ಸೇರಿದ ಫಾರಂ ಹೌಸ್ ಮೇಲೆ ಪೊಲೀಸರು ದಾಳಿ ನಡೆಸಿದ್ದು ಭಾರಿ ಮೊತ್ತದ ನಗದು ವಶಪಡಿಸಿಕೊಂಡಿದ್ದಾರೆ.
ಫಾರ್ಮ್ ಹೌಸ್ನಲ್ಲಿ ಕೆಲವರು ಜೂಜಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು ಜೂಜಾಟದಲ್ಲಿ ನಿರತರಾಗಿದ್ದ ದೊಡ್ಡ ದೊಡ್ಡ ವ್ಯಕ್ತಿಗಳು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಸಿನಿಮಾ ನಿರ್ಮಾಪಕ ಸುನಿಲ್ ಚೌಧರಿ ಸಹ ಪೊಲೀಸರ ವಶಕ್ಕೆ ದೊರೆತಿದ್ದಾರೆ ಎನ್ನಲಾಗಿದೆ. ಆದ್ರೆ ಪೊಲೀಸರು ದಾಳಿ ನಡೆಸಿದ ವೇಳೆ ತಾವು ಜೂಜು ಆಡುತ್ತಿರಲಿಲ್ಲವೆಂದು, ಕೇವಲ ಫ್ರೆಂಡ್ಲಿಯಾಗಿ ತ್ರೀ ಕಾರ್ಡ್ಸ್ ಆಡುತ್ತಿದ್ದುದಾಗಿ ಹೇಳಿದ್ದಾರೆ. ತಮ್ಮದು ಗೋವಾದಲ್ಲಿ ಕ್ಯಾಸಿನೋಗಳಿವೆ, ದೀಪಾವಳಿ ಸಂದರ್ಭದಲ್ಲಿ ಇಲ್ಲಿ ಕೆಲವು ಗೆಳೆಯರು ಸೇರಿ ಆಟ ಆಡುತ್ತೇವೆ ಎಂದು ಸಬೂಬು ಹೇಳಿದ್ದಾರೆಂದು ವರದಿ ಆಗಿದೆ.
ಅಲ್ಲದೇ ಅವರಿಂದ ಭಾರಿ ಮೊತ್ತದ ನಗದು ಹಣ, ಮೊಬೈಲ್, ಪೋಕರ್ ಆಡಲು ಬಳಸುವ ವಸ್ತುಗಳನ್ನು ಹಾಗೂ ಹಣ ಎಣಿಸುವ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಹೈದರಾಬಾದ್ ಹೊರವಲಯದಲ್ಲಿನ ನಾಗ ಶೌರ್ಯರಿಗೆ ಸೇರಿದ ಫಾರಂ ಹೌಸ್ ಮೇಲೆ ದಾಳಿಯಾಗಿದೆ. ಸುಮನ್ ಗುಟ್ಟಾ ಹೆಸರಿನ ವ್ಯಕ್ತಿಯೊಬ್ಬ ಖ್ಯಾತ ಉದ್ಯಮಿಗಳು, ನಟರನ್ನು ಒಟ್ಟಿಗೆ ಸೇರಿಸಿಕೊಂಡು ಪೋಕರ್ ಆಡಿಸುತ್ತಿದ್ದ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ವೇಳೆ 67 ಲಕ್ಷ ರು ನಗದು, 33 ಮೊಬೈಲ್ ಫೋನ್, ಮೂರು ಕಾರು, ಎರಡು ಕ್ಯಾಸಿನೊ ಬಾಕ್ಸ್ ಹಾಗೂ ಕೆಲವು ಹಣ ಎಣಿಸುವ ಯಂತ್ರಗಳನ್ನು ಹೈದರಾಬಾದ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ 30 ಜನರನ್ನು ಬಂಧಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಸುಮನ್ ಗುಟ್ಟಾ ಎಂಬಾತ ಸಹ ಬಂಧಿತನಾಗಿದ್ದು, ಆತನ ಮೇಲೆ ಹಲವು ವಂಚನೆ ಪ್ರಕರಣಗಳು ಇವೆ ಎನ್ನಲಾಗಿದೆ. ನಟ ಶೌರ್ಯಗೆ ಸೇರಿದ ಅದೇ ಫಾರಂ ಹೌಸ್ನಲ್ಲಿ ಹಲವು ಸೆಟಲ್ ಮೆಂಟ್ಗಳು, ರಿಯಲ್ ಎಸ್ಟೇಟ್ ವ್ಯಾಪಾರಗಳನ್ನು ಮಾಡುತ್ತಿದ್ದುದಾಗಿ ಪೊಲೀಸರು ಆರೋಪಿಸಿದ್ದಾರೆ.