ಮಂಡ್ಯ: ನಾಗಮಂಗಲ ಗಲಭೆ (Nagamangala Violence) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಹಲವರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಹಲವರು ಬಂಧನ ಭೀತಿಯಿಂದಾಗಿ ಗ್ರಾಮ ತೊರೆದಿದ್ದಾರೆ. ಹೀಗೆ ಬಂಧನ ಭೀತಿಯಲ್ಲಿ ಗ್ರಾಮ ತೊರೆದಿದ್ದ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಾಗಮಂಗಲದ ಬದ್ರಿಕೊಪ್ಪಲು ಗ್ರಾಮದ ಕಿರಣ್ (23) ಸಾವನ್ನಪ್ಪಿದ ಯುವಕ. ಈ ಯುವಕ ಬ್ರೈನ್ ಸ್ಟ್ರೋಕ್ ನಿಂದಾಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಸೆ. 11ರಂದು ರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ನಾಗಮಂಗಲದಲ್ಲಿ ಗಲಭೆ ನಡೆದಿತ್ತು. ಘಟನೆ ನಡೆದ ನಂತರ ಯುವಕ ಗ್ರಾಮ ತೊರೆದಿದ್ದ.
ಯುವಕ ಬಂಧನದ ಆತಂಕದಲ್ಲಿಯೇ ಇದ್ದ. ಹೀಗಾಗಿ ಕಿರಣ್ ಗೆ ಬ್ರೈನ್ ಸ್ಟ್ರೋಕ್ ಆಗಿತ್ತು. ಹೀಗಾಗಿ ಆತನನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಕಿರಣ್ ತಂದೆ ಬಂಧನವಾಗಿದ್ದಾರೆ. ಕುಮಾರ್ ಪ್ರಕರಣದ ಎ17 ಆರೋಪಿಯಾಗಿದ್ದಾರೆ.