ಹಾಸನ : ಹುಲಿಯಾ ಮತ್ತು ಬಂಡೆ ಝೂನಲ್ಲಿ ಇರಲಷ್ಟೆ ಫಿಟ್, ಸಮಾಜದಲ್ಲಿ ಇರಲು ಅನ್ ಫಿಟ್ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ವಿರುದ್ಧ ರಾಜ್ಯ ಬಿಜೆಪಿ ಸಾರಥಿ ನಳೀನ್ ಕುಮಾರ್ ಕಟೀಲ್ ಅವರು ವ್ಯಂಗ್ಯವಾಡಿದ್ದಾರೆ.
ಚನ್ನರಾಯಪಟ್ಟಣದಲ್ಲಿ ಕಾಂಗ್ರೆಸ್ ನಾಯಕರ ಆರೋಪಗಳ ಬಗ್ಗೆ ಮಾತನಾಡಿದ ಕಟೀಲ್, ಆಡಳಿತದಲ್ಲಿ ತಪ್ಪಿದ್ರೆ ವಿಧಾನಸೌಧದಲ್ಲಿ ಬಂದು ಗಲಾಟೆ ಮಾಡಿ. ನಿಮಗೆ ಹಕ್ಕಿದೆ. ಬಹಳ ಪುರಾತನ ಇತಿಹಾಸ ಇರುವ ರಾಜಕೀಯ ಪಕ್ಷವಾಗಿ ಚಿಲ್ಲರೆ ರಾಜಕಾರಣ ಮಾಡುತ್ತಾ ಕೋವಿಡ್ ಸಮಯದಲ್ಲಿ ಜನರಿಗೆ ಭಯ ಮೂಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಲೆಕ್ಕ ಕೊಡಿ ಎಂಬ ಅಭಿಯಾನದ ಬಗ್ಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ನಲ್ಲಿ ಏನೆಲ್ಲಾ ಮೋಸ ಆಗಿದೆ ಲೆಕ್ಕ ಕೊಡಿ. ನಿಮ್ಮ ಕಾಲದಲ್ಲಿ ವಸತಿ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು. ಹಾಗೇ ರಾಜ್ಯ, ರಾಷ್ಟ್ರವನ್ನು ಸುದೀರ್ಘವಾಗಿ ಆಡಳಿತ ಮಾಡಿ ವೆಂಟಿಲೇಟರ್ ಇಲ್ಲ ಸೌಲಭ್ಯ ಇಲ್ಲ ಅಂತಾರೆ. ಇಂದಿನ ಈ ಸ್ಥಿತಿಗೆ ನೀವೆ ಕಾರಣ ಎಂದು ಕಾಂಗ್ರೆಸ್ ಪಕ್ಷವನ್ನು ದೂರಿದ ಕಟೀಲ್, ನಿಮ್ಮ ಕಾಲದಲ್ಲಿ ಎಷ್ಟು ವೆಂಟಿಲೇಟರ್ ಬಂದವು ಎಲ್ಲಿ ಹೋದವು. ನಿಮ್ಮ ಆಡಳಿತದ ಕಾಲದಲ್ಲಿ ಡೆಂಗ್ಯೂ, ಹಾವು ಕಡಿತ, ಹುಚ್ಚು ನಾಯಿ ಕಡಿತಕ್ಕೆ ಔಷಧಿಯೇ ಬಂದಿರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮುಂದುವರಿದು ಮಾತನಾಡುತ್ತ ಪ್ರಜಾಪ್ರಭುತ್ವ ಉಳಿಸಿ ಎಂಬ ಕಾಂಗ್ರೆಸ್ ನಾಯಕರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದವರು ಇಂದಿರಾ ಗಾಂಧಿ. ಎಮರ್ಜೆನ್ಸಿ ತಂದವರು, ದೇಶವನ್ನು ಪೂರ್ತಿಯಾಗಿ ಜೈಲಲ್ಲಿ ಇಟ್ಟವರು ನೀವು ತಾನೆ. 20ಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಬಹುಮತ ಪಡೆದ ಪಕ್ಷವನ್ನು ಕಿತ್ತು ಒಗೆದಿದ್ರಿ. ಜನತಾದಳದ ಶಾಸಕರನ್ನು ನೀವೇ ಅಲ್ಲವೆ ತೆಗೆದಿಕೊಂಡಿದ್ದು. ನೀವು ಅಧಿಕಾರ ಹೇಗೆ ಬೇಕಾದರೂ ನಡೆಸಬಹುದು. ನಿಮ್ಮ ಆಡಳಿತ ಸರಿಯಿಲ್ಲ ಎಂದು ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದರೆ ನಮ್ಮ ಆಡಳಿತ ಸರಿಯಿಲ್ಲ ಎನ್ನುತ್ತೀರಾ ಎಂದು ಕಾಂಗ್ರೆಸ್ ನಾಯಕರಿಗೆ ಕಟೀಲ್ ತಿರುಗೇಟು ನೀಡಿದರು.