ಉಡುಪಿ: ಬಿಜೆಪಿ ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆಯನ್ನು ಪಂಚರತ್ನ ಸಮಿತಿ ರಚನೆ ಮತ್ತು ಪಂಚಸೂತ್ರದ ಅನುಷ್ಠಾನದ ಮೂಲಕ ಎದುರಿಸಿ ಗರಿಷ್ಠ ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ರಾಜ್ಯದ ಪ್ರಥಮ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಕಟೀಲ್, ಜಿಲ್ಲೆಯಲ್ಲಿ ಒಂದು ವಾರ್ ರೂಂ, ಜಿಲ್ಲೆಗೊಂದು ಕಾಲ್ ಸೆಂಟರ್, ಪ್ರತಿ ಮತಗಟ್ಟೆಯಲ್ಲಿ ಪಂಚರತ್ನ ಸಮಿತಿ, ಕುಟುಂಬ ಸಮ್ಮಿಲನ, ಪೇಜ್ ಪ್ರಮುಖ್ ಹೊಂದಿರುವುದೇ ಈ ಪಂಚಸೂತ್ರದ ಕಾರ್ಯತಂತ್ರವಾಗಿದೆ. ಇದು ಬಿಜೆಪಿ ಬೆಂಬಲಿತರ ಗೆಲುವಿನ ವೇಗವನ್ನು ವೃದ್ಧಿಸಲಿದೆ ಎಂದು ತಿಳಿಸಿದರು.

ಕಾರ್ಯಕರ್ತರು ಗ್ರಾಮ ಪಂಚಾಯಿತಿ ಚುನಾವಣಾ ಕೆಲಸ ಪ್ರಾರಂಭ ಮಾಡಬೇಕೆಂಬ ಉದ್ದೇಶದಿಂದ ಗ್ರಾಮ ಸ್ವರಾಜ್ ಸಮಾವೇಶಗಳಿಗೆ ಚಾಲನೆ ಕೊಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಗಳು ಹಾಗೂ ಪಂಚಾಯತ್ಗಳಿಗೆ ಕೊಟ್ಟ ಗರಿಷ್ಠ ಅನುದಾನ, ಯೋಜನೆಗಳ ಕುರಿತು ಜನರಿಗೆ ತಿಳಿಸುವುದೇ ಈ ಸಮಾವೇಶದ ಉದ್ದೇಶ. ೩೧ ಜಿಲ್ಲೆಗಳಲ್ಲಿ ಸಮಾವೇಶ ನಡೆಯಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅತಿ ಹೆಚ್ಚು ಅನುದಾನದ ಮೂಲಕ ಪಂಚಾಯತ್ ಗಳನ್ನು ಸಶಕ್ತೀಕರಣಗೊಳಿಸಿದೆ. ಗ್ರಾಮಗಳು ಸಶಕ್ತವಾದರೆ ದೇಶ ಬಲಿಷ್ಠವಾಗಲು ಸಾಧ್ಯ ಎಂಬ ಮಹಾತ್ಮ ಗಾಂಧಿಯವರ ಚಿಂತನೆಯ ಅನುಷ್ಠಾನಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಸರಕಾರವೂ ಪಂಚಾಯತ್ ಗಳನ್ನು ಬಲಪಡಿಸುತ್ತಾ ಸಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಮೆಚ್ಚುಗೆ ಸೂಚಿಸಿದರು.
ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್, ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಉಪಾಧ್ಯಕ್ಷ ಶಂಕರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಸಂಸದ ಎಸ್. ಮುನಿಸ್ವಾಮಿ, ಶಾಸಕರುಗಳಾದ ರಘುಪತಿ ಭಟ್, ಬಿ.ಎಂ. ಸುಕುಮಾರ್ ಶೆಟ್ಟಿ, ರಾಜ್ಯ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಗೀತಾ ವಿವೇಕಾನಂದ, ವಿಭಾಗ ಪ್ರಭಾರಿಗಳಾದ ಉದಯ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ, ನಳಿನ್ ಕುಮಾರ್ ಕಟೀಲ್, ಉಡುಪಿ ನಗರದ ಹೊರ ವಲಯದಲ್ಲಿರುವ ಡಾ. ವಿ. ಎಸ್. ಆಚಾರ್ಯ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ಕೃಷ್ಣ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದು ಗೋಪೂಜೆ ಮಾಡುವುದರ ಮೂಲಕ ಗ್ರಾಮ ಸ್ವರಾಜ್ಯ ಸಮಾವೇಶಕ್ಕೆ ಚಾಲನೆ ನೀಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








