“ತಾಕತ್ತಿದ್ದರೆ ದಲಿತ ಸಿಎಂ ಮಾಡಿ” ಸಿದ್ದು ಸವಾಲ್ ಗೆ ಕಟೀಲ್ ಟಾಂಗ್
ಉಡುಪಿ : ಬಿಜೆಪಿಗೆ ತಾಕತ್ತಿದ್ದರೆ ಅಹಿಂದ ಅಭ್ಯರ್ಥಿಯನ್ನು ನಿಲ್ಲಿಸಿ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟಾಂಗ್ ನೀಡಿದ್ದು, ಸಿದ್ದರಾಮಯ್ಯ ಅಹಿಂದ ಹೋರಾಟವನ್ನು ಮಾಡಿ ಸಿಎಂ ಪಟ್ಟಕ್ಕೇರಿದಾಗ ಅಹಿಂದವನ್ನು ಮರೆತು ಬಿಟ್ಟರು. ಅವರಿಂದ ಹಿಂದುಳಿದ ವರ್ಗಕ್ಕಾಗಿ ಏನು ಮಾಡಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರವನ್ನು ವಹಿಸಿಕೊಂಡ ಬಳಿಕ ಅಹಿಂದವನ್ನು ಮರೆತಿದ್ದಾರೆ.
ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ರಾತ್ರಿ ಹಗಲು ಶ್ರಮವಹಿಸಿದ ಪರಮೇಶ್ವರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ ಇತಿಹಾಸವಿದೆ.
ಹೀಗಾಗಿ ಸಿದ್ದರಾಮಯ್ಯ ಅವರು ಅಹಿಂದ ಹೆಸರನ್ನು ಉಲ್ಲೇಖ ಮಾಡುವುದು ಎಷ್ಟು ಸರಿಯೆಂಬುದು ಜನರಿಗೆ ಗೊತ್ತು ಎಂದು ಸಿದ್ದರಾಮಯ್ಯ ವಿರುದ್ಧ ಕಟೀಲ್ ಕಿಡಿಕಾರಿದರು.
ಇನ್ನು ದಲಿತ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷಕ್ಕೆ ಇದುವರೆಗೆ ಕಾಂಗ್ರೆಸ್ ನ ಹಾಗೆ ಸುದೀರ್ಘ ಅವಧಿಯ ಅಧಿಕಾರ ಸಿಕ್ಕಿಲ್ಲ.
ಹಿಂದೆ ವಾಜಪೇಯಿ ಅವರ ಕಾಲದಲ್ಲಿ ಮುಸ್ಲಿಂ ವ್ಯಕ್ತಿ ಅಬ್ದುಲ್ ಕಲಾಂನಂಥವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು ಗೊತ್ತೇ ಇದೆ.
ಈಗ ನರೇಂದ್ರ ಮೋದಿಯವರು ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿಯನ್ನಾಗಿ ಕೊಟ್ಟಿದ್ದಾರೆ. ರಾಜ್ಯದಲ್ಲಿ ಗೋವಿಂದ ಕಾರಂಜೋಳ ಅವರನ್ನು ಡಿಸಿಎಂಯನ್ನಾಗಿ ಮಾಡಲಾಗಿದೆ. ಕೇಂದ್ರದಲ್ಲಿ ನಾರಾಯಣ ಸ್ವಾಮಿ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ ಎಂದು ತಿರುಗೇಟು ನೀಡಿದರು.










