ಮುಂಬೈ, ಮೇ 31 : ದೇಶದಲ್ಲಿ ಕೊರೊನಾ ಅಬ್ಬರಿಸುತ್ತಾ ಸಾಗಿದೆ. ಇದರ ಮಧ್ಯೆ ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಹರಡಲು ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ಪ್ರಮುಖ ಕಾರಣ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ. ಅಲ್ಲದೇ ಲಾಕ್ ಡೌನ್ ಜಾರಿ ಮಾಡುವ ವೇಳೆ ಕೇಂದ್ರ ಸರ್ಕಾರ ಯಾವುದೇ ಪೂರ್ವ ಯೋಜನೆ ಇಲ್ಲದೆ ಕ್ರಮ ತೆಗೆದುಕೊಂಡಿತ್ತು. ಈಗ ಲಾಕ್‌ಡೌನ್ ತೆರವುಗೊಳಿಸುವ ವಿಚಾರದಲ್ಲಿ ರಾಜ್ಯಗಳಿಗೆ ಅಧಿಕಾರ ನೀಡಿದೆ ಎಂದು ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆಬ್ರವರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದಿದ್ದರು. ಟ್ರಂಪ್ ಸ್ವಾಗತಕ್ಕಾಗಿ ಅಹಮದಬಾದ್ ನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನಂತರ ಮುಂಬೈ, ದೆಹಲಿಗೆ ಟ್ರಂಪ್ ಭೇಟಿ ಮಾಡಿದ್ದರು. ಈ ಕಾರ್ಯಕ್ರಮಗಳಿಂದಲೇ ಕೊರೊನಾ ವೈರಸ್ ಹರಡಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ.
ಇನ್ನು ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ”ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರವನ್ನು ಕೆಡವಲು ಬಿಜೆಪಿ ನಾನಾ ಪ್ರಯತ್ನಗಳನ್ನು ಮಾಡುತ್ತಿದೆ. ಮಹಾರಾಷ್ಟ್ರ ವಿಕಾಸ್ ಅಘಾಡಿ ಅಡಿಯಲ್ಲಿ ಶಿವಸೇನಾ, ಕಾಂಗ್ರೆಸ್, ಎನ್‌ಸಿಪಿ ಮೈತ್ರಿ ಸರ್ಕಾರ ರಚನೆ ಮಾಡಿದೆ. ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ” ಎಂದು ಸಂಜಯ್ ರಾವತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.








