ಅಹಮದಾಬಾದ್ : ವಿಶ್ವದಾದ್ಯಂತ ಅಬ್ಬರಿಸುತ್ತಿರುವ ಕೊರೊನಾ ವೈರಸ್ ಗುಜರಾತ್ ನಲ್ಲಿ ಹರಡಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಲ್ಗೊಂಡಿದ್ದ ನಮಸ್ತೆ ಟ್ರಂಪ್ ಕಾರ್ಯಕ್ರಮವೇ ಕಾರಣ ಎಂದು ಗುಜರಾತ್ ಕಾಂಗ್ರೆಸ್ ನ ರಾಜ್ಯಾಧ್ಯಕ್ಷ ಅಮಿತ್ ಚಾವ್ಡಾ ಆರೋಪಿಸಿದ್ದಾರೆ.
ಗುಜರಾತ್ ನಲ್ಲಿ ಕೊರೊನಾ ಸೋಂಕು 400ರ ಗಡಿ ತಲುಪಿದ್ದು, ಇದುವರೆಗೂ 28 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಸೋಂಕು ಹರಡುವಿಕೆ ಪ್ರಮಾಣವೂ ಹೆಚ್ಚಾಗ್ತಿದೆ. ಈ ಹಿನ್ನೆಲೆಯಲ್ಲಿ ಅಹಮದಾಬಾದ್ ನಲ್ಲಿ ಮಾತನಾಡಿರುವ ಅಮಿತ್ ಚಾವ್ಡಾ, ಫೆಬ್ರವರಿ 24 ರಂದು ಆಯೋಜಿಸಿದ್ದ ಕಾರ್ಯಕ್ರಮವೇ ಕೊರೊನಾ ಸೋಂಕು ರಾಜ್ಯದಲ್ಲಿ ತೀವ್ರವಾಗಿ ಹರಡಲು ಕಾರಣ. ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಸೇರಿದ್ದರು. ಹೀಗಾಗಿ ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಬಗ್ಗೆ ವಿಶೇಷ ತನಿಖಾ ತಂಡದಿಂದ ಸ್ವತಂತ್ರ ತನಿಖೆ ಆಗಬೇಕು. ಮೇಲಾಗಿ ಪಕ್ಷವೂ ಈ ಬಗ್ಗೆ ತನಿಖೆಗೆ ಆಗ್ರಹಿಸಿ ಸದ್ಯದಲ್ಲೇ ಗುಜರಾತ್ ಹೈಕೋರ್ಟ್ ನ ಮೆಟ್ಟಿಲೇರೋದಾಗಿ ತಿಳಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ನ ಆರೋಪವನ್ನು ಆಧಾರ ರಹಿತ ಎಂದು ರಾಜ್ಯ ಬಿಜೆಪಿ ತಳ್ಳಿಹಾಕಿದೆ.








