ನವದೆಹಲಿ : ಹೆಮ್ಮಾರಿ ಕೊರೊನಾ ವಿರುದ್ಧ ಜಾಗತಿಕವಾಗಿ ಸದ್ಯ ದೊಡ್ಡ ಯುದ್ಧವೇ ನಡೆಯುತ್ತಿದೆ. ಈ ಮಹಾಮಾರಿಯನ್ನು ಮಣಿಸಲು ಒಂದು ರಾಷ್ಟ್ರಕ್ಕೆ ಮತ್ತೊಂದು ರಾಷ್ಟ್ರ ಹೆಗಲು ಕೊಟ್ಟು ಒಟ್ಟಾಗಿ ಹೋರಾಡುವುದು ಅತೀ ಮುಖ್ಯವಾಗಿದೆ. ಅದರಂತೆ ಭಾರತ ಹಲವು ದೇಶಗಳಿಗೆ ಸಹಾಯ ಮಾಡಿದೆ. ಅಮೆರಿಕಾಗೆ ಹೈಡ್ರೋಕ್ಲೋರೋಕ್ವಿನ್ ಮಾತ್ರೆಗಳನ್ನು ಕಳುಹಿಸುವುದರ ಜೊತೆಗೆ ಏಷ್ಯಾದ ಹಲವು ರಾಷ್ಟ್ರಗಳಿಗೆ ವೈದ್ಯಕೀಯ ಸಲಕರಣೆಗಳನ್ನು ಕೂಡ ರಫ್ತು ಮಾಡಿದೆ. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಮೋದಿ ಸರ್ಕಾರ, ಕೊರೊನಾ ವಿರುದ್ಧ ಹೋರಾಡಲು ಒಟ್ಟು 90ರಾಷ್ಟ್ರಗಳಿಗೆ 110 ರಿಂದ 120 ಕೋಟಿ ಮೌಲ್ಯದ ವೈದ್ಯಕೀಯ ಸಲಕರಣೆಗಳು ಹಾಗೂ ಪರೀಕ್ಷಾ ಕಿಟ್ ನೀಡಲು ಮುಂದಾಗಿದೆ.
ಈಗಾಗಲೇ ಈ ಬಗ್ಗೆ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದ್ದು, ಒಟ್ಟು 67 ರಾಷ್ಟ್ರಗಳಿಗೆ 60ಕೋಟಿ ಮೌಲ್ಯದ ಔಷಧಿ, ಟೆಸ್ಟಿಂಗ್ ಕಿಟ್ ಹಾಗೂ ವೈದ್ಯಕೀಯ ಸಲಕರಣೆ ಪೂರೈಕೆ ಮಾಡಲಾಗುತ್ತಿದೆ. ಇದರ ಹೊರತಾಗಿಯೂ ನಮಗೆ ಬೇರೆ ರಾಷ್ಟ್ರಗಳಿಂದಲೂ ಮನವಿ ಬಂದಿದ್ದು ಅವುಗಳಿಗೂ ಪೂರೈಕೆ ಮಾಡಲು ಪ್ರಧಾನಿ ಕಾರ್ಯಾಲಯ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ, ಇನ್ನೂ 50 ರಿಂದ 60 ಕೋಟಿ ಮೌಲ್ಯದ ಸಲಕರಣೆಗಳು ಸದ್ಯದಲ್ಲಿಯೇ ಹಲವು ರಾಷ್ಟ್ರಗಳಿಗೆ ರಫ್ತಾಗಲಿವೆ ಎಂದು ತಿಳಿಸಿದೆ. ಈ ಬಗ್ಗೆ ಪ್ರಧಾನಿ ಮೋದಿ ಖುದ್ದು ವಿದೇಶಾಂಗ ಮಂತ್ರಿ ಆರ್ ಜೈಶಂಕರ್ ಅವರಿಗೆ ಸೂಚನೆ ನೀಡಿದ್ದು ಕೊವಿಡ್-19 ವಿಚಾರದಲ್ಲಿ ಅದಷ್ಟು ಹೆಚ್ಚು ದೇಶಗಳಿಗೆ ನಮ್ಮ ಸಹಾಯ ದೊರಕುವಂತೆ ನೋಡಿಕೊಳ್ಳಲು ಹೇಳಿದ್ದಾರೆ. ಇನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪಶ್ಚಿಮ ಏಷ್ಯಾ ರಾಷ್ಟ್ರಗಳಾದ ಸೌದಿ ಅರೆಬಿಯಾ, ಯುಎಇ, ಕುವೈತ್ ಹಾಗೂ ಜೊರ್ಡಾನ್ ನತ್ತ ಹೆಚ್ಚು ದೃಷ್ಟಿ ನೆಟ್ಟಿದ್ದಾರೆ. ಇತ್ತ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಹರ್ಷವರ್ದನ್ ಶ್ರೀಂಗಲ್ ಗೆ ಈ ಯೋಜನೆಯನ್ನು ಸಮರ್ಪಕವಾಗಿ ನಿಭಾಯಿಸುವ ಜವಾಬ್ದಾರಿ ನೀಡಲಾಗಿದೆ.








