ಲಡಾಖ್ : ಗಲ್ವಾನ್ ಘರ್ಷಣೆಯಲ್ಲಿ ಗಾಯಗೊಂಡಿದ್ದ ಭಾರತೀಯ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಧೈರ್ಯ ತುಂಬಿದ್ದಾರೆ. ಗಲ್ವಾನ್ ಘರ್ಷಣೆಯಲ್ಲಿ ಗಾಯಗೊಂಡಿದ್ದ ಭಾರತೀಯ ಯೋಧರಿಗೆ ಲೇಹ್ ನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಈ ಆಸ್ಪತ್ರೆಗೆ ಭೇಟಿ ನೀಡಿದ್ದ ಪ್ರಧಾನಿಗಳು ಪ್ರತಿಯೊಬ್ಬ ಯೋಧರ ಬಳಿಗೆ ತೆರಳಿ ಸ್ವತಃ ಯೋಗಕ್ಷೇಮ ವಿಚಾರಿಸಿದರು.
ಬಳಿಕ ಯೋಧರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನಮ್ಮನ್ನು ಅಗಲಿದ ಧೈರ್ಯಶಾಲಿಗಳು ಯಾವುದೇ ಕಾರಣವಿಲ್ಲದೆ ನಿರ್ಗಮಿಸಲಿಲ್ಲ. ನೀವೆಲ್ಲರೂ ಸೂಕ್ತವಾದ ಉತ್ತರವನ್ನೇ ನೀಡಿದ್ದೀರಿ. ನಾನು ನಿಮಗೆ ಮತ್ತು ನಿಮ್ಮಂತಹ ಧೈರ್ಯಶಾಲಿಗಳಿಗೆ ಜನ್ಮ ನೀಡಿದ ತಾಯಂದಿರಿಗೆ ಗೌರವ ಸಲ್ಲಿಸುತ್ತೇನೆ. ಎಲ್ಲರೂ ಬಹುಬೇಗ ಗುಣಮುಖರಾಗುತ್ತೀರಿ ಎಂದು ಭಾವಿಸುವುದಾಗಿ ಹೇಳಿದರು.
ನಿಮ್ಮ ಧೈರ್ಯ, ನೀವು ಸುರಿಸಿರುವ ರಕ್ತ ನಮ್ಮ ಯುವಕರಿಗೆ, ದೇಶದ ಪ್ರಜೆಗಳಿಗೆ ತಲೆಮಾರುಗಳವರೆಗೂ ಸ್ಫೂರ್ತಿ ನೀಡುತ್ತದೆ. ನಮ್ಮ ದೇಶವೂ ಜಗತ್ತಿನ ಯಾವುದೇ ಶಕ್ತಿ ಎದುರು ತಲೆಬಾಗುವುದಿಲ್ಲ. ನಿಮ್ಮಂತಹ ಧೈರ್ಯಶಾಲಿಗಳ ಕಾರಣದಿಂದಾಗಿ ನಾನು ಇದನ್ನು ಹೇಳಲು ಸಮರ್ಥವಾಗಿದ್ದೇನೆ ಎಂದರು.
ಜೂನ್ 15ರಂದು ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ-ಚೀನಾ ಸೈನಿಕರ ಸಂಘರ್ಷದಲ್ಲಿ ಭಾರತದ 20 ಮಂದಿ ಯೋಧರು ಹುತಾತ್ಮರಾಗಿದ್ದು, ಹಲವು ಸೈನಿಕರು ಗಾಯಗೊಂಡಿದ್ದರು.








