ಹಾಸನ: ತಿರುಪತಿ ಲಡ್ಡು ಪ್ರಸಾದದಲ್ಲಿ (Tirupati Laddu Row) ಪ್ರಾಣಿಗಳ ಕೊಬ್ಬಿನಾಂಶ ಪತ್ತೆಯಾದ ನಂತರ ಕರ್ನಾಟಕದ ನಂದಿನಿ ಶುದ್ಧ ತುಪ್ಪಕ್ಕೆ (Nandini Ghee)ಭಾರೀ ಬೇಡಿಕೆ ಬರುತ್ತಿದೆ. ತಿರುಪತಿಯ ವಿವಾದದ ಬೆನ್ನಲ್ಲೇ ಟಿಟಿಡಿ ನಂದಿನಿ ತುಪ್ಪ ಬಳಸಲು ಮುಂದಾಗಿದೆ. ಇದರ ಮಧ್ಯೆ ಈಗ ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುತ್ತಿದ್ದ ಹಾಸನದ ಅಧಿದೇವತೆ ಹಾಸನಾಂಬೆ ಪ್ರಸಾದಕ್ಕೂ ನಂದಿನಿ ತುಪ್ಪ ಬಳಸಲು ಅಲ್ಲಿನ ಆಡಳಿತ ಮಂಡಳಿ ನಿರ್ಧರಿಸಿದೆ.
ಹಾಸನಾಂಬೆ ದೇವಾಲಯದ (Hasanamba Temple) ಗರ್ಭಗುಡಿ ಬಾಗಿಲು ತೆರೆಯಲು ಒಂದು ತಿಂಗಳು ಮಾತ್ರ ಬಾಕಿ ಇದೆ. ಹೀಗಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾಸನಾಂದ ಮಹೋತ್ಸವದಲ್ಲಿ ಕೂಡ ಭಕ್ತರಿಗೆ ಲಡ್ಡು ಪ್ರಸಾದ ನೀಡಲಾಗುತ್ತದೆ. ಹೀಗಾಗಿ ಲಡ್ಡು ತಯಾರಿಸಲು ನಂದಿನ ತುಪ್ಪ ಬಳಕೆ ಮಾಡಲು ಮುಂದಾಗಲಾಗಿದೆ.
ಈ ಜವಾಬ್ದಾರಿಯನ್ನು ಬೆಂಗಳೂರಿನ ಇಸ್ಕಾನ್ ಸಂಸ್ಥೆಗೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಕೆಲವೇ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ನಂದಿನಿ ತುಪ್ಪ, ಹಾಲು ಹಾಗೂ ಹಾಲಿನ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಹಾಲು ಒಕ್ಕೂಟದಲ್ಲೂ ಬೇಡಿಕೆ ಹೆಚ್ಚಿದೆ. ಈಗಾಗಲೇ ಧಾರ್ಮಿಕ ಧತ್ತಿ ಇಲಾಖೆಯ ದೇವಸ್ಥಾನಗಳಲ್ಲೂ ನಂದಿನಿ ತುಪ್ಪ ಬಳಕೆಗೆ ಸರ್ಕಾರ ಆದೇಶಿಸಿದೆ. ನಂದಿನಿ ಉತ್ಪನ್ನಗಳು ಮಾರಾಟಕ್ಕೆ ಸಾಲುತ್ತಿಲ್ಲ. ಹೀಗಾಗಿ ಕೆಎಂಎಪ್ ಪರ್ಯಾಯ ಚಿಂತನೆ ಮಾಡುತ್ತಿದೆ ಎನ್ನಲಾಗಿದೆ.