ನಾನು ಉದ್ಧವ್ ಠಾಕ್ರೆ ಕಪಾಳಕ್ಕೆ ಬಾರಿಸುತ್ತಿದ್ದೆ : ವಿವಾದಕ್ಕೀಡಾದ ಕೇಂದ್ರ ಸಚಿವ
ಮುಂಬೈ : ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ನಡುವೆ ಮುಸುಕಿನ ಗುದ್ದಾಟ ಮುಂದುವರೆದಿದೆ. ಉಭಯ ಪಕ್ಷಗಳ ನಾಯಕರು ಇಬ್ಬರನೊಬ್ಬರು ಕಾಲೆಳೆಯುತ್ತಾ, ಟೀಕಿಸಿಕೊಳ್ಳುತ್ತಾ ವಾಕ್ಸಮರ ಮುಂದುವರೆಸಿದ್ದಾರೆ.
ಈ ಮಧ್ಯೆ ಮಹಾ ಸಿಎಂ ಉದ್ಧವ್ ಠಾಕ್ರೆ ಬಗ್ಗೆ ಕೇಂದ್ರ ಸಚಿವ ನಾರಾಯಣ್ ರಾಣೆ ನೀಡಿದ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಲ್ಲದೆ ಈ ವಿವಾದಾತ್ಮಕ ಹೇಳಿಕೆಯಿಂದ ಅವರು ಬಂಧನಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ರಾಯಗಡದಲ್ಲಿ ಸೋಮವಾರ ಜನ್ ಆಶೀರ್ವಾದ್ ಯಾತ್ರೆಯಲ್ಲಿ ಮಾತನಾಡುತ್ತಾ ನಾರಾಯಣ್ ರಾಣೆ, ಮುಖ್ಯಮಂತ್ರಿಗೆ ಸ್ವಾತಂತ್ರ್ಯದ ವರ್ಷ ಗೊತ್ತಿಲ್ಲದಿರುವುದು ನಾಚಿಕೆಗೇಡು. ಅವರು ಎಷ್ಟನೇ ವರ್ಷದ ಸ್ವಾತಂತ್ರ್ಯ ಎಂದು ಕೇಳಲು ಹಿಂದೆ ಬಾಗಿದರು. ನಾನು ಅಲ್ಲಿರುತ್ತಿದ್ದರೆ ಕಪಾಳಕ್ಕೆ ಬಾರಿಸುತ್ತಿದ್ದೆ ಎಂಬ ಹೇಳಿಕೆ ನೀಡಿದ್ದರು.
ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದು, ಶಿವಸೇನಾ ನಾಯಕರು, ಕಾರ್ಯಕರ್ತರು ನಾರಾಯಣ್ ರಾಣೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.
ಶಿವಸೇನಾ ಕಾರ್ಯಕರ್ತರು ಮುಂಬೈ ಮತ್ತು ಇತರ ಸ್ಥಳಗಳಲ್ಲಿ ಹಲವಾರು ಪೋಸ್ಟರ್‍ಗಳನ್ನು ಹಾಕಿದ್ದು ರಾಣೆಯನ್ನು ‘ಕೊಂಬಿಡಿ ಚೋರ್’ (ಕೋಳಿ ಕಳ್ಳ) ಎಂದು ಕರೆದಿದ್ದಾರೆ.
ಅಲ್ಲದೆ ಶಿವಸೇನಾ – ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಾ ಗಲಾಟೆ ಮಾಡುತ್ತಿದ್ದಾರೆ.









