ಅತೃಪ್ತ ಆತ್ಮಗಳ ಮೋಕ್ಷಕ್ಕಾಗಿ ನಾರಾಯಣ ಬಲಿ ಎನ್ನುವ
ಹಿಂದೂಗಳ ಅದಮ್ಯ ಪ್ರಾಚೀನ ನಂಬಿಕೆ:
ಹಿಂದೂಗಳಲ್ಲಿ ನಾರಾಯಣ ಬಲಿ ಮತ್ತು ನಾಗಬಲಿ, ತ್ರಿಪಿಂಡಿ ಶ್ರಾದ್ಧ ಎಂಬ ಧಾರ್ಮಿಕ ಕ್ರಿಯೆಗಳ ಒಂದು ಅದಮ್ಯ ನಂಬಿಕೆಯಿದೆ. ಇಲ್ಲಿ ನಾರಾಯಣ ಬಲಿ ಪೂಜೆಯನ್ನು ಅತೃಪ್ತ ಆತ್ಮಗಳ ಮೋಕ್ಷಕ್ಕೋಸ್ಕರ ಮಾಡಲಾಗುತ್ತದೆ ಎನ್ನುವುದು ಆ ತರಹದ ಒಂದು ನಂಬಿಕೆ. ಮೋಕ್ಷ ನಾರಾಯಣ ಬಲಿಪೂಜೆಯಿಂದ ಭೂತ ಪ್ರೇತಾವಾಗಿರುವ ಆತ್ಮಗಳು ಮುಕ್ತಿ ಹೊಂದುವ ವಿಧಾನ ಎನ್ನಲಾಗುತ್ತದೆ.
ಮೋಕ್ಷ ನಾರಾಯಣ ಬಲಿ ಪೂಜೆಯನ್ನು ಅತೃಪ್ತ ಆತ್ಮಗಳ ಮೋಕ್ಷಕ್ಕೋಸ್ಕರ ಮಾಡಲಾಗುತ್ತದೆ.
ಮನೆಯಲ್ಲಿನ ಹಣಕಾಸಿನ ಸಮಸ್ಯೆ, ಹೆಣ್ಣು ಮಕ್ಕಳು ಕೂಗಾಡುವುದು ಮಕ್ಕಳಿಂದ ತೊಂದರೆ,
ಮದುವೆಗೆ ವಿಘ್ನ, ಅಳಿಯನ ಕಿರಿಕಿರಿ, ಹೀಗೆಲ್ಲ ಆಗುವುದು ಆತ್ಮಗಳು ಅತೃಪ್ತರಾಗಿ ಕಾಡುವಂತಹ ವಿಚಾರ. ಪರಾಶರ ಸ್ಮೃತಿ ಗ್ರಂಥಗಳು ಆಧಾರವಾಗಿದೆ. ಪರಾಶರ ಗ್ರಂಥಗಳಲ್ಲಿ ಹೇಳಿದ ಹಾಗೆ ಕಲಿಯುಗದಲ್ಲಿ ಮನುಷ್ಯನು 60 ವರ್ಷ ಬದುಕಿದರೆ ಅದು ದೀರ್ಘಾಯುಷ್ಯವೆಂದು ಹೇಳಲಾಗುತ್ತದೆ
ಈ ಆಧಾರದಲ್ಲಿ ಹೇಳುವುದಾದರೆ, ಯಾರು 60 ವರ್ಷ ಬದುಕುವುದಿಲ್ಲವೋ ಅಂದರೆ 60 ವರ್ಷ ಮೊದಲೇ ಸಾವನ್ನಪ್ಪಿದರೆ ಅದು ದುರ್ಮರಣವೆಂದು ಪರಿಗಣಿಸಲ್ಪಡುತ್ತದೆ. ಈ ರೀತಿ 60 ವರ್ಷ ಮೊದಲು ಅಥವಾ ಮನೆಯಲ್ಲಿ ಪೂರ್ವಜರು ಯಾರಾದರೂ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಬಾಣಂತಿ ತೀರಿಕೊಂಡಿದ್ದರೆ, ಅಕಸ್ಮಾತ್ತಾಗಿ ಆಕ್ಸಿಡೆಂಟ್ ತರಹ ಅವಘಡದಲ್ಲಿ ತೀರಿಕೊಂಡಿದ್ದರೆ, ಕೊಲೆ ಆಗಿದ್ದರೆ ಇಂತಹ ಆತ್ಮಗಳಿಗೆ ಮೊಕ್ಷ ಇರುವುದಿಲ್ಲ ಆ ಆತ್ಮ ನರಳಿದಾಗ ಆ ಒಂದು ವಂಶಕ್ಕೆ ಪಿತೃಶಾಪ ತಟ್ಟುತ್ತದೆ ಅನ್ನುವ ನಂಬಿಕೆ ಹಿಂದಿನಿಂದಲೂ ಚಾಲ್ತಿಯಲ್ಲಿದೆ.
ಈ ಒಂದು ಶಾಪದಿಂದ ಆರ್ಥಿಕ ಕುಂದಾಗುತ್ತದೆ, ಮನೆತನದಲ್ಲಿ ಕಾದಾಟ, ಸಂತಾನ ಹೀನತೆ, ವಂಶ ಅಭಿವೃದ್ಧಿ ಕುಂಠಿತ, ಮಕ್ಕಳಾಗದಿರುವದು, ಮಕ್ಕಳು ಮದುವೆಯಲ್ಲಿ ಬಾಧೆ ಈ ಎಲ್ಲ ತೊಂದರೆಗಳಿಗೆ ಪರಿಹಾರ ನಾಗಬಲಿ, ನಾರಾಯಣ ಬಲಿ, ಮತ್ತು ತ್ರಿಪಿಂಡಿ ಶ್ರಾದ್ಧ ಅಂದರೆ ಹವನದ ಮೂಲಕ ಪಿತೃಗಳಿಗೆ ಅನ್ನ ದೊರಕಿಸಿ ಕೊಡುವುದು, ಇದರಿಂದ ಸ್ತ್ರೀ ಶಾಪ ಕೂಡ ಪರಿಹಾರವಾಗುತ್ತದೆ ಅನ್ನುವ ನಂಬಿಕೆಯನ್ನು ಪೋಷಿಸಿಕೊಂಡು ಬರಲಾಗುತ್ತಿದೆ. ಜೊತೆಗೆ ಶಾಸ್ತ್ರಗಳನ್ನು ಅನುಸರಿಸುವವರು
ಆರು ವರ್ಷಕ್ಕೊಮ್ಮೆ ತ್ರಿಪಿಂಡಿ ಶ್ರಾದ್ಧವನ್ನು, ಪಕ್ಷಮಾಸದಲ್ಲಿ ತಿಳಿಯದೆ ತಪ್ಪಾಗಿದ್ದಲ್ಲಿ ಪಿತೃಗಳಿಗೆ ನೋವಾಗಿದ್ದರೆ ಆ ತ್ರಿಪಿಂಡಿ ಶ್ರಾದ್ಧದಿಂದ ಮೋಕ್ಷ ಸಿಗುತ್ತದೆ ಎನ್ನುವ ಪರಂಪರೆಯನ್ನು ಅನುಸರಿಸುತ್ತಾರೆ.
ವಿಷಪ್ರಾಶನ ಮರಣ, ನೇಣು ಹಾಕಿಕೊಳ್ಳುವುದು, ನೀರಿನಲ್ಲಿ ಮುಳುಗಿ ಸಾಯುವುದು,
ಮರ ಅಥವಾ ಕಟ್ಟಡದಿಂದ ಬಿದ್ದು ಸಾಯುವುದು, ಬೆಂಕಿ ಅವಘಡಗಳಲ್ಲಿ ಸಾವು, ವಿದ್ಯುತ್
ಸ್ಪರ್ಶದಿಂದ ಸಂಭವಿಸುವ ಸಾವು, ಮದುವೆ ಆಗದೆ ಬ್ರಹ್ಮಚಾರಿ ಮರಣ, ಪ್ರಸೂತಿಕಾ ಅಂದರೆ ಬಾಣಂತಿ ಮರಣ, ಮಕ್ಕಳು, ಸಂತಾನ ಇಲ್ಲದೆ ಸಾವು, ಕ್ಯಾನ್ಸರ್, ಕುಷ್ಠ, ಇತ್ಯಾದಿ ಮಾರಕ ರೋಗಗಳಿಂದ ಸಾವು, ಕೊಲೆಯಂತಹ ದುರ್ಮರಣವನ್ನು ಅಕಾಲ ಮರಣವೆನ್ನಲಾಗುತ್ತದೆ. ಈ ರೀತಿ ಅಕಾಲ ಮರಣ ಹೊಂದಿದರೆ ಅಂತಹ ಆತ್ಮಗಳ ಸದ್ಗತಿಗೋಸ್ಕರ ಮಾಡುವ ಪೂಜೆಯೇ ನಾರಾಯಣ ಬಲಿ.
ನಾರಾಯಣಬಲಿ ಪೂಜೆಯ ಸ್ಥಾನಗಳು: ಗೋಕರ್ಣ, ಅಯೋಧ್ಯಾ, ಮಥುರಾ ಮಾಯಾ, ಕಾಶಿ, ಕಾಂಚಿ ಹರಿದ್ವಾರ ದ್ವಾರಕಾ ಬದರಿ ಗಯಾ ಇತ್ಯಾದಿ ಮೋಕ್ಷ ಕ್ಷೇತ್ರಗಳಲ್ಲಿ ಮಾಡಬೇಕೆಂದು ಪುರಾಣಗಳಲ್ಲಿ ಹೇಳಲಾಗಿದೆ. ಇನ್ನು ನಾರಾಯಣ ಬಲಿ ಪೂಜೆಯನ್ನು ವರ್ಷದ ವಿಶೇಷ ಮಾಸಗಳಲ್ಲಿ ಅಂದರೆ ಪ್ರತಿ ಮಾಸದ ಶುಕ್ಲ ಮತ್ತು ಕೃಷ್ಣ ಪಕ್ಷದ ಪಂಚಮಿ, ಷಷ್ಠಿ, ಸಪ್ತಮಿ, ದಶಮಿ ಏಕಾದಶಿ, ದ್ವಾದಶಿ, ಚತುರ್ದರ್ಶಿ, ಹುಣ್ಣಿಮೆ ಅಥವಾ ಅಮಾವಾಸ್ಯೆ ಗಳಲ್ಲಿ ವಿಶೇಷವಾಗಿ ಮಾಡಬಹುದು. ʻಆಶಾಢಾದಿ ಅಪರ ಪಂಚ ಪಕ್ಷಸು’ ಎನ್ನುವಂತೆ ಆಶಾಢ, ಶ್ರಾವಣ, ಭಾದ್ರಪದ, ಅಶ್ವಿನ, ಕಾರ್ತಿಕ-ಈ ಐದು ಮಾಸಗಳು ಪಿತೃಗಳಿಗೆ ಪ್ರಿಯವಾದುದಾಗಿದೆ.
ಈ ರೀತಿ ದುರ್ಮರಣ, ಅಕಾಲ ಮರಣದಿಂದ ಸಾವನ್ನಪ್ಪಿದರೆ, ಅಂತಹ ಆತ್ಮಗಳಿಗೆ ಮೋಕ್ಷ ಸಿಗಲು ಈ ಪೂಜೆಯನ್ನು ಮಾಡಬೇಕು. ಇಲ್ಲವಾದರೆ ಅಂತಹ ಅತೃಪ್ತ ಆತ್ಮಗಳ ಶಾಪವೇ ಕಾಲಕ್ರಮೇಣ ಪಿತೃಶಾಪ, ಪ್ರೇತಶಾಪ, ಪಿತೃದೋಷ, ಪ್ರೇತದೋಷ, ಸ್ತ್ರೀ ಶಾಪ ಇತ್ಯಾದಿ ಶಾಪಗಳಾಗಿ ಕುಟುಂಬಕ್ಕೆ ಕಾಡುವುದು. ಈ ಶಾಪದ ಪರಿಹಾರಕ್ಕಾಗಿ
ಮಾಡುವ ಪೂಜೆಯೇ ನಾರಾಯಣ ಬಲಿ ಪೂಜೆ.
ನಾರಾಯಣ ಬಲಿ ಪೂಜೆಯ ವಿವರವನ್ನು ಗರುಡ ಪುರಾಣದಲ್ಲಿಯೂ ವಿವರಿಸಲಾಗಿದ್ದು, ಇದನ್ನು ಹೀಗೆ ವ್ಯಾಖ್ಯಾನಿಸಲಾಗಿದೆ: ಉಪವಾಸದಿಂದ, ಪ್ರಾಣಿಗಳಿಂದ, ಆಕಸ್ಮಿಕವಾಗಿ, ಅಗ್ನಿಸ್ಪರ್ಶದಿಂದ, ಶಾಪದಿಂದ ಸಾವು, ಕಾಲರಾ ಅಥವಾ ಕಾಯಿಲೆಯಿಂದ, ಅಕಾಲಿಕ ಮರಣ, ಆತ್ಮಹತ್ಯೆ, ಪರ್ವತ, ಮರ ಅಥವಾ ಯಾವುದೇ ಎತ್ತರದಿಂದ ಬಿದ್ದು, ಮುಳುಗುವುದು, ದರೋಡೆಕೋರರಿಂದ ಸಾವು, ಹಾವು ಕಚ್ಚುವಿಕೆಯಿಂದ, ಗುಡುಗು-ಮಿಂಚಿನಿಂದ, ಕೊಲೆ, ಜಾತಕದಲ್ಲಿ ಪಿತೃ ದೋಷ, ಮದುವೆಯಲ್ಲಿ ವಿಳಂಬ, ಮಗುವನ್ನು ಗರ್ಭಧರಿಸುವಲ್ಲಿ ತೊಂದರೆಗಳು, ವ್ಯವಹಾರ ನಷ್ಟ, ಕೌಟಂಬಿಕ ಸಮಸ್ಯೆಗಳು, ಇತ್ಯಾದಿ. ಅಲ್ಪಾವಧಿ ಅಸ್ವಾಭಾವಿಕ ಸಾವಿಗೆ ಶ್ರಾದ್ಧ ಆಚರಣೆಗಳಿಲ್ಲ. ಇದಕ್ಕೆ ನಾರಾಯಣ ಬಲಿ ಪರಿಹಾರ.
ನಾರಾಯಣ ಬಲಿ ಪೂಜೆಯಲ್ಲಿ ವೈದಿಕ ಮಂತ್ರಗಳನ್ನು ಪಠಣ ಮಾಡಿ ಆತ್ಮಗಳನ್ನು ತ್ರಪ್ತಿ ಮಾಡಲಾಗುತ್ತದೆ. ಕುಟುಂಬದಲ್ಲಿ ಅಸ್ವಾಭಾವಿಕ ಸಾವು, ಜಾತಕದಲ್ಲಿ ಪಿತ್ರ ದೋಷ ಇದ್ದಾಗ, ಜೀವನ ಸಂಬಂಧಿತ ಘಟನೆಗಳ ಕಾರಣದಿಂದಾಗಿ ತಮ್ಮ ಪೂರ್ವಜರಿಗಾಗಿ ಕೆಲವು ರೀತಿಯ ಪೂಜೆಗಳನ್ನು ಮಾಡಬೇಕು ಎಂದು ನೀವು ಸಂಕಲ್ಪಮಾಡಿಕೊಂಡಾಗ, ಅವಿವಾಹಿತ ಪುರುಷ/ಮಹಿಳೆಯ ಸಾವು ಸಂಭವಿಸಿದಾಗ, ಮದುವೆಯಲ್ಲಿ ವಿಳಂಬ /ಗರ್ಭಧರಿಸುವಲ್ಲಿ ತೊಂದರೆ ಆದಾಗ, ಅಸಹಜ ಸಾವು /ಜಾತಕದಲ್ಲಿ ಪಿತ್ರ ದೋಷ ಕಂಡು ಬಂದಾಗ ನಾರಾಯಣ ಬಲಿ ಪೂಜೆಯ ಅಗತ್ಯದ ಕುರಿತು ಧಾರ್ಮಿಕ ವಿದ್ವಾಂಸರು ಸಲಹ ನೀಡುತ್ತಾರೆ. ನಾರಾಯಣ ಬಲಿ ಪೂಜೆಯಲ್ಲಿ ಈ ಕೆಳಗಿನ ಹಂತಗಳಿವೆ
.
ನಾರಾಯಣ ಬಲಿ ಸಂಕಲ್ಪ: ಪೂಜೆ ಮಾಡುವರ ಹೆಸರು, ನಕ್ಷತ್ರ, ಗೋತ್ರ ಮತ್ತು ನಾರಾಯಣ ಬಲಿ ಪೂಜೆಯ ಉದ್ದೇಶವನ್ನು ಹೇಳುವ ವೈದಿಕ ಮಂತ್ರ ಪ್ರಕ್ರಿಯೆ.
ಪ್ರೇತ ಸಂಕಲ್ಪ: ಅಗಲಿದ ಆತ್ಮಗಳ ಹೆಸರು ಮತ್ತು ಪೂಜೆ ಮಾಡುವರೊಂದಗೆ ಅವರ ಸಂಬಂಧವನ್ನು ಹೇಳುವದು ಮತ್ತು ಸಾವಿನ ಕಾರಣ ಉಲ್ಲೇಖಿಸುವುದು.
ವಿನಾಯಕ ಪೂಜೆ: ಶಿವ ಪುರಾಣದ ಪ್ರಕಾರ, ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ವಿನಾಯಕನನ್ನು ಪೂಜಿಸುವುದು ಆಚರಣೆ.
ಶ್ರೀಫಲ (ತೆಂಗಿನಕಾಯಿ) ಬಳಸಿ ಅಗಲಿದ ಆತ್ಮಗಳಿಗೆ ಪ್ರೇತ ಆಹ್ವಾನ: ನಿರ್ಗಮಿಸಿದ ಆತ್ಮಗಳನ್ನು ನಿಗದಿತ ಕ್ರಮದಲ್ಲಿ ಒಂದೊಂದಾಗಿ ಕರೆಯುವ ವೈದಿಕ ಪ್ರಕ್ರಿಯೆ.
ದಶ ಪಿಂಡ ಪ್ರಧಾನ: ಅಗಲಿದ ಆತ್ಮಗಳಿಗೆ ಆಹಾರವನ್ನು ಅರ್ಪಿಸುವುದು.
ಬ್ರಹ್ಮ, ವಿಷ್ಣು, ರುದ್ರ, ಯಮ, ಸವಿತ್ರ ದೇವತಾ ಕಲಶ ಸ್ಥಾಪನೆ ಮತ್ತು ಪೂಜೆ.
ಪಂಚಕ ಶ್ರಾದ್ಧ: ವಿಷ್ಣು ದೇವರಿಗೆ ಐದು ಪಿಂಡ ಪ್ರಧಾನ.
ನಾರಾಯಣ ಬಲಿ ಹೋಮ: ನಾರಾಯಣ ಬಲಿ ಮಂತ್ರಗಳನ್ನು ಹೋಮ ರೂಪದಲ್ಲಿ ಪಠಿಸುವುದು.
ಪ್ರಾಯಶ್ಚಿತ ತಿಲ ಹೋಮ, ಪಂಚ ಸೂಕ್ತ ಪಾರಾಯಣ: ಪಾರಾಯಣ ಮತ್ತು ನಿರ್ಧಾರಿತ ಸಂಖ್ಯೆಯ ಪ್ರಾಯಶ್ಚಿತ ತಿಲ ಹೋಮ.
ದಶದಾನ: ಅನುಕೂಲಕ್ಕೆ ಅನುಗುಣವಾಗಿ 10 ರೀತಿಯ ದೇಣಿಗೆ ನೀಡಲಾಗುತ್ತದೆ.
ಪ್ರಯೋಜನಗಳು. ಆತ್ಮವು ಶಾಂತಿಯುತವಾಗಿ ಸರಿಯಾದ ಸ್ಥಾನವನ್ನು ತಲಪುತ್ತದೆ, ಕುಟುಂಬಕ್ಕೆ ಉತ್ತಮ ಆರೋಗ್ಯ,
ಮನಸ್ಸಿನ ಶಾಂತಿ, ವ್ಯವಹಾರ ಮತ್ತು ಶಿಕ್ಷಣದಲ್ಲಿ ಯಶಸ್ಸು, ವಿವಾಹಿತ ಜೀವನ (ಗರ್ಭಧಾರಣೆ ಮತ್ತು
ಸಂಬಂಧ), ವಿವಾಹದ ಅಡಚಣೆಗಳ ಪರಿಹಾರ, ಎಲ್ಲಾ ಶುಭ ಕಾರ್ಯಗಳು ಸಮಯಕ್ಕೆ ಸರಿಯಾಗಿ
ಆಗುತ್ತದೆ, ಕುಟಂಬದಲ್ಲಿ ಅಸಹಜ ಮರಣಗಳು ಸಂಭವಿಸುವದನ್ನ ತಪ್ಪಿಸುತ್ತದೆ.
ಕೃಪೆ: ಹಿಂದವೀ ಸ್ವರಾಜ್ಯ