ಕನಕದಾಸರು ಮತ್ತು ಮಹರ್ಷಿ ವಾಲ್ಮಿಕಿ ಪ್ರತಿಮೆಗಳಿಗೆ ಮೋದಿ ಪುಷ್ಪ ನಮನ…
ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ಮೋದಿ ವಿಧಾನಸೌಧದಲ್ಲಿ ಬಳಿ ಇರುವ ಕನಕದಾಸರು ಮತ್ತು ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ. ರಾಜ್ಯಾದ್ಯಂತ ಇಂದು ಕನಕ ಜಯಂತಿಯನ್ನ ಆಚರಿಸಲಾಗುತ್ತಿದೆ.
“ಇಂದು ಕನಕದಾಸರ ಜಯಂತಿಯ ಶುಭ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಶ್ರೀ ಕನಕದಾಸರಿಗೆ ಗೌರವ ನಮನ ಸಲ್ಲಿಸಿದೆ. ಭಕ್ತಿಯ ಮಾರ್ಗವನ್ನು ತೋರಿಸಿ, ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿ, ಸಾಮಾಜಿಕ ಏಕತೆಯ ಸಂದೇಶವನ್ನು ಸಾರಿದ ಸಂತ ಕನಕದಾಸರಿಗೆ ನಾವು ಸದಾ ಚಿರಋಣಿಗಳಾಗಿರುತ್ತೇವೆ “ ಎಂದು ಮೋದಿ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ
ಬೆಂಗಳೂರಿಗೆ ಆಗಮಿಸಿದ ನಂತರ ಪ್ರಧಾನಿ ಮೋದಿ ಕೆಎಸ್‌ಆರ್ ನಿಲ್ದಾಣದಲ್ಲಿ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದರು ಇದರ ಜೊತೆಗೆ ಭಾರತ್ ಗೌರವ್ ಕಾಶಿ ದರ್ಶನ ರೈಲಿಗೆ ಹಸಿರು ನಿಶಾನೆ ತೋರಿಸಿದರು.
ನಂತರ ಪ್ರಧಾನಿ ಮೋದಿ ಅವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಹೊಸ ಟರ್ಮಿನಲ್ ಅನ್ನು ಉದ್ಘಾಟಿಸಲಿದ್ದಾರೆ ಮತ್ತು ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡರ 108 ಅಡಿ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.
ಪ್ರಧಾನಿ ಮೋದಿ ಭೇಟಿ ಪ್ರಯುಕ್ತ ಬೆಂಗಳೂರಿನಲ್ಲಿ ಹಲವೆಡೆ ಸಂಚಾರ ನಿರ್ಬಂಧಗಳನ್ನ ವಿಧಿಸಲಾಗಿದೆ. ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅನ್ವಯವಾಗಲಿದೆ.
ಸಿಟಿಒ ಜಂಕ್ಷನ್, ಪೊಲೀಸ್ ತಿಮ್ಮಯ್ಯ ಜಂಕ್ಷನ್, ರಾಜಭವನ ರಸ್ತೆ, ಬಸವೇಶ್ವರ ವೃತ್ತ, ಅರಮನೆ ರಸ್ತೆ, ರೇಸ್ ಕೋರ್ಸ್ ರಸ್ತೆ, ಸ್ಯಾಂಕಿ ರಸ್ತೆ, ಕ್ವೀನ್ಸ್ ರಸ್ತೆ, ಬಳ್ಳಾರಿ ರಸ್ತೆ, ಏರ್‌ಪೋರ್ಟ್ ಎಲಿವೇಟೆಡ್ ಕಾರಿಡಾರ್, ಮಹಾರಾಣಿ ಸೇತುವೆ, ಶೇಷಾದ್ರಿ ರೈಲು ನಿಲ್ದಾಣದ ಪ್ರವೇಶ ದ್ವಾರದವರೆಗೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಶಾಂತಲಾ ಜಂಕ್ಷನ್‌ನಿಂದ ಮೈಸೂರು ಬ್ಯಾಂಕ್ ವೃತ್ತದಿಂದ ಕೆ ಜಿ ರಸ್ತೆ, ಖೋಡೆ ಅಂಡರ್‌ಪಾಸ್‌ನಿಂದ ವಾಟಾಳ್ ನಾಗರಾಜ್ ರೋಡ್ ಪಿಎಫ್ ಕಚೇರಿ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸುವವರು ಆದಷ್ಟು ಬದಲಿ ಮಾರ್ಗ ಬಳಸಬೇಕಾಗಿದೆ.
Narendra Modi in Bangalore : PM Modi pays floral tributes to saint poet Kanakadasa and Maharshi Valmiki








