ರಾಯಚೂರು : ನರೇಂದ್ರ ಮೋದಿ ದೇಶದ ಬೇಜವಾಬ್ದಾರಿ ಪ್ರಧಾನಮಂತ್ರಿ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಆರ್ ಹಿರೇಮಠ, ಕೊರೊನಾ ಲಾಕ್ ಡೌನ್ ವಿಚಾರವಾಗಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
‘ಲಾಕ್ ಡೌನ್ ವೇಳೆ ಪ್ರಧಾನಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಯಾವುದೇ ಮುಂಜಾಗೃತಾ ಕ್ರಮ ತೆಗೆದುಕೊಳ್ಳದ ಕಾರಣ ವಲಸೆ ಕಾರ್ಮಿಕರ ಸಾವು ನೋವು ಸಂಭವಿಸಿತ್ತು. ನೋಟ್ ಬ್ಯಾನ್ ನಿಂದ ಸಾವಿರಾರು ಜನರು ನೌಕರಿ ಕಳೆದುಕೊಂಡರು. ಈಗ ಲಾಕ್ ಡೌನ್ ನಿಂದ 10 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕೇಂದ್ರದ ವಿರುದ್ಧ ಹಿರೇಮಠ ಕಿಡಿಕಾರಿದರು.
ಲಾಕ್ ಡೌನ್ ಮಾಡುವ ಮುನ್ನ ಯೋಚಿಸಿ ನಿರ್ಧಾರವನ್ನು ಕೈಗೊಂಡು, ನಾಲ್ಕು ದಿನಗಳ ಮೊದಲು ಸೂಚನೆ ನೀಡಿ ಲಾಕ್ ಡೌನ್ ಘೋಷಣೆ ಮಾಡಬೇಕಾಗಿತ್ತು. ವಲಸೆ ಕಾರ್ಮಿಕರ ಬಗ್ಗೆ ಚಿಂತೆ ಇಲ್ಲದೆ ಲಾಕ್ ಡೌನ್ ಮಾಡಿದ್ದು ಮಹಾ ಮೂರ್ಖತನ ನಿರ್ಧಾರ ಎಂದು ಹಿರೇಮಠ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದರು.








