ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯೊಬ್ಬರನ್ನು ಪೊಲೀಸರು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ (NCW) ಮಧ್ಯಪ್ರವೇಶಿಸಿದೆ.
ಘಟನೆಯ ಕುರಿತು ಸಂಪೂರ್ಣ ವಿವರಗಳೊಂದಿಗೆ ವಿಸ್ತೃತ ವರದಿ ಸಲ್ಲಿಸುವಂತೆ ಆಯೋಗವು ರಾಜ್ಯ ಪೊಲೀಸ್ ಇಲಾಖೆಗಳಿಗೆ ಸೂಚನೆ ನೀಡಿದೆ.
ಈ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗವು ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಗೆ (DGP) ಅಧಿಕೃತ ಪತ್ರ ರವಾನಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ತೆಗೆದುಕೊಳ್ಳಲಾದ ಕ್ರಮಗಳು, ಪ್ರಸ್ತುತ ತನಿಖಾ ಸ್ಥಿತಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಐದು ದಿನಗಳೊಳಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ.
ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯ ಸಿಬ್ಬಂದಿಯೇ ಈ ಹಲ್ಲೆಗೆ ಕಾರಣರಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಪ್ರಕರಣ ಹೆಚ್ಚು ಸಂವೇದನಶೀಲವಾಗಿದ್ದು, ಮಹಿಳೆಯರ ಗೌರವ ಹಾಗೂ ಮಾನವ ಹಕ್ಕುಗಳಿಗೆ ಸಂಬಂಧಿಸಿದ ಗಂಭೀರ ವಿಷಯವೆಂದು ಆಯೋಗ ಪರಿಗಣಿಸಿದೆ.
ಘಟನೆಯು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜಕೀಯ ಪಕ್ಷಗಳು ಹಾಗೂ ನಾಗರಿಕ ಸಂಘಟನೆಗಳು ನ್ಯಾಯಕ್ಕಾಗಿ ಒತ್ತಾಯಿಸುತ್ತಿವೆ. ಇದೀಗ ರಾಷ್ಟ್ರೀಯ ಮಹಿಳಾ ಆಯೋಗದ ಮಧ್ಯಪ್ರವೇಶದಿಂದಾಗಿ ಪ್ರಕರಣದ ತನಿಖೆಗೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆ ಮೂಡಿದೆ.








