ಅಂಗನವಾಡಿಗಳಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆ – ಹಾಲಪ್ಪ ಆಚಾರ್..
ಪ್ರಸಕ್ತ ಸಾಲಿನಲ್ಲಿ ರಾಜ್ಯದ 20 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ಶಾಲಾಪೂರ್ವಶಿಕ್ಷಣವನ್ನು ಜಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ವಿಧಾನಪರಿಷತ್ತಿನಲ್ಲಿಂದು ತಿಳಿಸಿದ್ದಾರೆ.
ಜೆಡಿಎಸ್ ಸದಸ್ಯ ಗೋವಿಂದ ರಾಜು ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯಕ್ರಮಗಳನ್ನು ಜಾರಿ ಮಾಡಲಾಗುವುದು . ನೂತನ ಶಿಕ್ಷಣ ನೀತಿ ಅನ್ವಯ ಶಾಲಾ ಪೂರ್ವ ಶಿಕ್ಷಣಕ್ಕೆ ಪಠ್ಯಕ್ರಮ ರೂಪಿಸಲು ಈಗಾಗಲೇ 6 ಸಮಿತಿಗಳನ್ನು ರಚಿಸಲಾಗಿದೆ. ಆ ಸಮಿತಿಗಳ ಶಿಫಾರಸ್ಸು ಆಧರಿಸಿ ಪಠ್ಯಕ್ರಮ ಸೇರಿ ಇತರ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು. ಸದರಿ ಪಠ್ಯ ಕ್ರಮ ಬೋಧನೆಗಾಗಿ ಕಾರ್ಯಕರ್ತರಿಗೆ ಅಗತ್ಯ ತರಬೇತಿ ನೀಡಲಾಗುವುದು ಎಂದರು.
ಅಂಗನವಾಡಿ ಕಾರ್ಯಕರ್ತರಿಗೆ ಆರು ತಿಂಗಳಿನಿಂದ ಒಂದು ವರ್ಷದ ಡಿಪ್ಲೋಮಾ ತರಬೇತಿ ನೀಡಲಾಗುವುದು. ಎನ್ ಇ ಪಿ ಪಠ್ಯ ಕ್ರಮ ಬೋಧನೆಗೆ ಹೊಸ ಶಿಕ್ಷಕರನ್ನು ನೇಮಿಸಿಕೊಳ್ಳುವುದಿಲ್ಲ ಎಂದು ಹೇಳಿದರು. ರಾಜ್ಯ ಸರ್ಕಾರ, ಸದ್ಯಕ್ಕೆ ಎನ್ ಇ ಪಿ ಜಾರಿ ಮಾಡಿಲ್ಲ, ತರಬೇತಿ ಸೇರಿ ಅಗತ್ಯವಾದ ಪೂರ್ವ ತರಬೇತಿ ನಡೆಸಲಾಗಿದೆ. ಮೂರ್ನಾಲ್ಕು ತಿಂಗಳಲ್ಲಿ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗುವುದು. ಅದಕ್ಕಾಗಿಯೇ ಸಮಿತಿ ರಚಿಸಲಾಗಿದೆ. ಕೇಂದ್ರ ಸರ್ಕಾರವೇ ಶೀಘ್ರ ಶಾಲಾಪೂರ್ವ ಶಿಕ್ಷಣವನ್ನು ಘೋಷಣೆ ಮಾಡಲಿದೆ ಎಂದರು.








