ರಾಷ್ಟ್ರಪತಿ ಚುನಾವಣೆ – ಮೋದಿ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ ದ್ರೌಪದಿ ಮುರ್ಮು
ರಾಷ್ಟ್ರಪತಿ ಸ್ಥಾನಕ್ಕಾಗಿ ನಡೆಯುತ್ತಿರುವ ಚುನಾವಣೆಗೆ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಒಡಿಶಾ ಮೂಲದ ಬುಡಕಟ್ಟು ಜನಾಂಗದ ಮಹಿಳೆ, ಜಾರ್ಖಂಡ್ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವ ಸಂಪುಟದ ಉನ್ನತ ಸಚಿವರು, ಬಿಜೆಪಿ ಮತ್ತು ಎನ್ ಡಿಎ ಮೈತ್ರಿಕೂಟದ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಇಂದು ಮಧ್ಯಾಹ್ನ ದೆಹಲಿಯ ಸಂಸತ್ತು ಭವನದಲ್ಲಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಹುದ್ದೆಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಮುನ್ನ ದ್ರೌಪದಿ ಮುರ್ಮು ಅವರು ಸಂಸತ್ತಿನಲ್ಲಿ ಮಹಾತ್ಮ ಗಾಂಧಿ, ಡಾ ಅಂಬೇಡ್ಕರ್ ಮತ್ತು ಬಿರ್ಸಾ ಮುಂಡಾ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು.
ಪ್ರಧಾನಿ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್, ಜೆಪಿ ನಡ್ಡಾ, ಲಾಲನ್ ಸಿಂಗ್, ಪಶುಪತಿ ಪಾರಸ್, ರೇಣು ದೇವಿ ಮತ್ತು ತಾರ್ಕಿಶೋರ್ ಪ್ರಸಾದ್ ಅವರು ದ್ರೌಪದಿ ಮುರ್ಮು ಅವರ ಅಧ್ಯಕ್ಷೀಯ ಉಮೇದುವಾರಿಕೆಗೆ ಪ್ರತಿಪಾದಕರಾಗಿ ಸಹಿ ಹಾಕಿದ್ದಾರೆ.
ದ್ರೌಪದಿ ಮುರ್ಮು ಅವರು ಶುಕ್ರವಾರ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಶರದ್ ಪವಾರ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಪ್ರಮುಖ ವಿರೋಧ ಪಕ್ಷದ ನಾಯಕರನ್ನ ವೈಯಕ್ತಿಕವಾಗಿ ಭೇಟಿ ಮಾಡಿ ಬೆಂಬಲವನ್ನ ಕೋರಲಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎಯ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವುದಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಗುರುವಾರ ಘೋಷಿಸಿದ್ದಾರೆ. ಮುರ್ಮು ಅವರನ್ನು ಬೆಂಬಲಿಸುವುದು ಎಸ್‌ಸಿ, ಎಸ್‌ಟಿ, ಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಪ್ರಾತಿನಿಧ್ಯಕ್ಕೆ ಯಾವಾಗಲೂ ಒತ್ತು ನೀಡುವ ಅವರ ಸಿದ್ಧಾಂತಕ್ಕೆ ಅನುಗುಣವಾಗಿದೆ ಎಂದು ಸಿಎಂ ಜಗನ್ ಹೇಳಿದ್ದಾರೆ.