ಧ್ಯಾನ್ ಚಾಂದ್ ಖೇಲ್ ರತ್ನ ಪ್ರಶಸ್ತಿ ನೀರಜ್ ಚೋಪ್ರಾಗೆ ಸಿಗಬೇಕು – ಬೈಚುಂಗ್ ಭುಟಿಯಾ
ನೀರಜ್ ಚೋಪ್ರಾ… 2021ರ ಭಾರತೀಯ ಕ್ರೀಡಾ ರಂಗದ ಸೂಪರ್ ಸ್ಟಾರ್. ಟೋಕಿಯೋ ಒಲಿಂಪಿಕ್ಸ್ ನ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಅವರು ಇತಿಹಾಸವನ್ನೇ ಬರೆದಿದ್ರು. ಒಲಿಂಪಿಕ್ ಕ್ರೀಡಾ ಇತಿಹಾಸದಲ್ಲೇ ಭಾರತಕ್ಕೆ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ತಂದಿರುವುದು ಅದ್ಭುತ ಸಾಧನೆಯಾಗಿದೆ.
ಭಾರತದ ಮಟ್ಟಿಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುವುದೇ ದೊಡ್ಡ ಸಾಧನೆಯಾಗುತ್ತಿತ್ತು. ಅಂತಹುದರಲ್ಲಿ ಪದಕ, ಅದರಲ್ಲೂ ಚಿನ್ನದ ಪದಕ ಗೆಲ್ಲುವುದು ಅಂದ್ರೆ ಅದು ಅಸಾಮಾನ್ಯವೇ ಸರಿ. ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು.
ಇದೀಗ ನೀರಜ್ ಚೋಪ್ರಾ ಅವರು ಪ್ರತಿಷ್ಠಿತ ಧ್ಯಾನ್ ಚಾಂದ್ ಖೇಲ್ ರತ್ನ ಪ್ರಶಸ್ತಿ ಪಡೆಯುವ ರೇಸ್ ನಲ್ಲಿ ನೀರಜ್ ಚೋಪ್ರಾ ಅವರು ಮುಂಚೂಣಿಯಲ್ಲಿದ್ದಾರೆ. ಈ ಪ್ರಶಸ್ತಿ ಪಡೆಯಲು ನೀರಜ್ ಚೋಪ್ರಾ ಎಲ್ಲಾ ಅರ್ಹತೆಗಳನ್ನು ಪಡೆದುಕೊಂಡಿದ್ದಾರೆ. ಆದ್ರೆ ಈ ಪ್ರಶಸ್ತಿ ಪಡೆಯುವುದು ಅಷ್ಟೊಂದು ಸುಲಭವಿಲ್ಲ. ಯಾಕಂದ್ರೆ ಈ ಬಾರಿ ಖೇಲ್ ರತ್ನ ಪ್ರಶಸ್ತಿ ಪಡೆಯಲು ಸಾಕಷ್ಟು ಸ್ಪರ್ಧೆಗಳಿವೆ. ಆದ್ರೂ ನೀರಜ್ ಚೋಪ್ರಾ ಅವರು ಪ್ರಶಸ್ತಿ ರೇಸ್ ನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
ಇದಕ್ಕೆ ಪೂರಕವಾಗಿ ನೀರಜ್ ಚೋಪ್ರಾ ಅವರಿಗೆ ಅರ್ಹವಾಗಿಯೇ ಧ್ಯಾನ್ ಚಾಂದ್ ಪ್ರಶಸ್ತಿ ಸಿಗಬೇಕು ಎಂದು ಭಾರತದ ಮಾಜಿ ಫುಟ್ ಬಾಲ್ ಆಟಗಾರ ಬೈಚುಂಗ್ ಭುಟಿಯಾ ಅವರು ಹೇಳಿದ್ದಾರೆ. ಬೈಚುಂಗ್ ಭುಟಿಯಾ ಅವರು ರಾಷ್ಟ್ರೀಯ ಕ್ರೀಡಾ ಸಮಿತಿಯ ಸದಸ್ಯರು ಕೂಡ ಆಗಿದ್ದಾರೆ.
ಈ ಬಾರಿ, ಪ್ರಶಸ್ತಿ ಆಯ್ಕೆ ಸಮಿತಿಗೆ ಸಾಕಷ್ಟು ಸವಾಲುಗಳಿವೆ. ಸಾಕಷ್ಟು ಕ್ರೀಡಾಪಟುಗಳು ಪ್ರಶಸ್ತಿ ರೇಸ್ ನಲ್ಲಿದ್ದಾರೆ. ಪ್ರತಿ ಬಾರಿಯೂ ಪ್ರಶಸ್ತಿ ಆಯ್ಕೆ ಸಮಿತಿಯು ಆಯ್ಕೆ ಮಾಡುವಾಗ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿತ್ತು. ಈ ಬಾರಿ ಸ್ವಲ್ಪ ಹೆಚ್ಚು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನನ್ನ ಪ್ರಕಾರ ಈ ಬಾರಿಯ ಧ್ಯಾನ್ ಚಾಂದ್ ಖೇಲ್ ರತ್ನ ಪ್ರಶಸ್ತಿಯು ನೀರಜ್ ಚೋಪ್ರಾಗೆ ಸಿಗಬೇಕು. ನೀರಜ್ ಚೋಪ್ರಾ ಈ ಪ್ರಶಸ್ತಿ ಪಡೆಯಲು ಅರ್ಹ ಕ್ರೀಡಾಪಟು. ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಯಲ್ಲಿ ಮೊದಲ ಬಾರಿ ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ ಎಂದು ಬೈಚುಂಗ್ ಭುಟಿಯಾ ಹೇಳಿದ್ದಾರೆ.
ಭಾರತೀಯ ಕ್ರೀಡಾಪ್ರಾಧಿಕಾರದ 55ನೇ ಆಡಳಿತ ಮಂಡಳಿಯ ಸಭೆಯಲ್ಲಿ ಬೈಚುಂಗ್ ಭುಟಿಯಾ ಈ ಮಾತನ್ನು ಹೇಳಿದ್ದಾರೆ. ಇದೇ ವೇಳೆ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಬಗ್ಗೆ ಕೂಡ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಕೇಂದ್ರ ಕ್ರೀಡಾ ಸಚಿವರಿಗೆ ಕ್ರೀಡೆಯ ಬಗ್ಗೆ ಅಪಾರ ಜ್ಞಾನವಿದೆ. ಇಂದಿನ ಸಭೆಯಲ್ಲಿ ಭಾರತದಲ್ಲಿ ಕ್ರೀಡೆಗಳನ್ನು ಯಾವ ರೀತಿ ಅಭಿವೃದ್ದಿ ಪಡಿಸಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆಸಲಾಯ್ತು. ಹಾಗೇ ಭಾರತೀಯ ಫುಟ್ ಬಾಲ್ ಆಟದ ಬಗ್ಗೆ ಮಾತನಾಡಿದ ಬೈಚುಂಗ್ ಭುಟಿಯಾ, ಫುಟ್ ಬಾಲ್ ಆಟ ಭಾರತದಲ್ಲಿ ಸುಧಾರಣೆಯಾಗಲು ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದೆ. ಆದ್ರೆ ಅದಕ್ಕೆ ತಕ್ಕಂತೆ ಆಗುತ್ತಿಲ್ಲ. ಆದ್ರೂ ಸಮಯವಕಾಶಬೇಕು ಎಂದು ಭುಟಿಯಾ ಅಭಿಪ್ರಾಯಪಟ್ಟಿದ್ದಾರೆ.








