ಹಿಂದಿನ ಮಾದರಿಯಲ್ಲೇ ನೀಟ್ ಪರೀಕ್ಷೆ – ಸುಪ್ರೀಂ ಕೋರ್ಟ್ ತರಾಟೆಯ ನಂತರ ನಿಲುವು ಬದಲಾಯಿಸಿದ ಕೇಂದ್ರ
2021 ರ ನೀಟ್ – ಪಿಜಿ ಸಫರ್ ಸ್ಪೆಷಿಯಾಲಿಟಿ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಅಂದ್ರೆ ಈ ಹಿಂದಿನ ಮಾದರಿಯಲ್ಲೇ ಪರೀಕ್ಷೆ ನಡೆಯಲಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ. ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ ಬಳಿಕ ಕೇಂದ್ರ ಸರ್ಕಾರ ತನ್ನ ನಿಲುವು ಬದಲಾಯಿಸಿದೆ. ಇನ್ನೂ ಹೊಸ ಮಾದರಿಯ ಪರೀಕ್ಷೆಯನ್ನ 2022 – 2023 ರ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗುವುದು ಎಂದು ಕೂಡ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರವು ತಿಳಿಸಿದೆ.
ಇನ್ನೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸರ್ಕಾರ ತಿಳಿಸಿದೆ. ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ವಿಕ್ರಮ್ ನಾಥ್ ಮತ್ತು ಬಿ.ವಿ.ನಾಗರತ್ನ ಅವರ ಪೀಠವು ಈ ಸಂಬಂಧ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರ ಹೇಳಿಕೆಯನ್ನು ದಾಖಲಿಸಿತು. ಅಲ್ಲದೆ ಈ ವರ್ಷದಿಂದಲೇ ನೀಟ್-ಸೂಪರ್ ಸ್ಪೆಷಾಲಿಟಿಯ ಪರೀಕ್ಷಾ ಮಾದರಿಯಲ್ಲಿ ಬದಲಾವಣೆಗಳನ್ನು ಜಾರಿಗೆ ತರುವ ಕೇಂದ್ರದ ಹಿಂದಿನ ನಿರ್ಧಾರವನ್ನು ಪ್ರಶ್ನಿಸಿದ್ದ ವಿದ್ಯಾರ್ಥಿಗಳ ಅರ್ಜಿಗಳನ್ನು ಇತ್ಯರ್ಥಪಡಿಸಿತು.
ಅಲ್ದೇ ಪರೀಕ್ಷಾ ಮಾದರಿಯಲ್ಲಿ ಮಾಡಿದ ಬದಲಾವಣೆಗಳ ಸಿಂಧುತ್ವದ ಕುರಿತ ಪ್ರಶ್ನೆಯನ್ನು ಮುಕ್ತವಾಗಿ ಬಿಡಲಾಗುವುದು ಎಂದು ನ್ಯಾಯಪೀಠ ಹೇಳಿದೆ. ಜುಲೈನಲ್ಲಿ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿದ ನಂತರ ಕೊನೆಯ ಕ್ಷಣದಲ್ಲಿ ಪರೀಕ್ಷಾ ಮಾದರಿಯಲ್ಲಿ ಬದಲಾವಣೆಗಳನ್ನು ಮಾಡಲು ಕೇಂದ್ರ ಹಾಗೂ ರಾಷ್ಟ್ರೀಯ ಪರೀಕ್ಷಾ ಮಂಡಳಿ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗ ನೀಡಿದ ಸಮರ್ಥನೆಗೆ ಸುಪ್ರೀಂ ಕೋರ್ಟ್ ಅತೃಪ್ತಿ ವ್ಯಕ್ತಪಡಿಸಿತ್ತು.








