ಭಾರತೀಯ ಟಿವಿ ಚಾನೆಲ್‌ಗಳಿಗೆ ನಿಷೇಧ ಹೇರಿದ ನೇಪಾಳ
ಕಠ್ಮಂಡ್, ಜುಲೈ 10: ಭಾರತ ಸರ್ಕಾರ ನಡೆಸುತ್ತಿರುವ ದೂರದರ್ಶನವನ್ನು ಹೊರತುಪಡಿಸಿ ಭಾರತೀಯ ಟಿವಿ ಚಾನೆಲ್‌ಗಳನ್ನು ನಿಷೇಧಿಸುವುದಾಗಿ ನೇಪಾಳಿ ಸರ್ಕಾರ ಗುರುವಾರ ಪ್ರಕಟಿಸಿದೆ. ಸ್ಥಳೀಯ ಕೇಬಲ್ ಟಿವಿ ಪೂರೈಕೆದಾರರನ್ನು ಉಲ್ಲೇಖಿಸಿ ಅಲ್ಲಿನ ಸುದ್ದಿ ಸಂಸ್ಥೆ ಇದನ್ನು ವರದಿ ಮಾಡಿದೆ.
ಆಧಾರರಹಿತ ಪ್ರಚಾರದ ದೂರುಗಳ ಮಧ್ಯೆ ಭಾರತೀಯ ‘ಸುದ್ದಿ’ ಚಾನೆಲ್‌ಗಳನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ. ನೇಪಾಳಿ ಮಹಿಳಾ ಪತ್ರಕರ್ತೆಯೊಬ್ಬರು ಭಾರತೀಯ ನಿರೂಪಕ ಅರ್ನಾಬ್ ಗೋಸ್ವಾಮಿ ಅವರು ನೇಪಾಳದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದು, ಅವರ ವಿರುದ್ಧ ವಾಗ್ದಾಳಿ ನಡೆಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.
ಮಾಜಿ ಉಪ ಪ್ರಧಾನಿ ಮತ್ತು ನೇಪಾಳ ಕಮ್ಯುನಿಸ್ಟ್ ಪಕ್ಷದ (ಎನ್‌ಸಿಪಿ) ವಕ್ತಾರ ನಾರಾಯಣ್ ಕಾಜಿ ಶ್ರೇಷ್ಠಾ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ, ನೇಪಾಳ ಸರ್ಕಾರ ಮತ್ತು ನಮ್ಮ ಪ್ರಧಾನ ಮಂತ್ರಿಯ ವಿರುದ್ಧ ಭಾರತೀಯ ಮಾಧ್ಯಮಗಳು ಆಧಾರರಹಿತ ಪ್ರಚಾರವು ಮಿತಿಗಳನ್ನು ಮೀರಿದ್ದು, ಇದು ಇನ್ನಷ್ಟು ಹೆಚ್ಚುತ್ತಿದೆ. ಕೂಡಲೇ ಇದನ್ನು ನಿಲ್ಲಿಸಿ ಎಂದು ಹೇಳಿದ್ದರು.
ಚೀನಾದ ಆಜ್ಞೆಯ ಮೇರೆಗೆ ವಿವಾದಾತ್ಮಕ ರಾಜಕೀಯ ನಕ್ಷೆಯನ್ನು ನೇಪಾಳ ಬಿಡುಗಡೆ ಮಾಡಿದ್ದಾಗಿ ರಿಪಬ್ಲಿಕ್ ಟಿವಿ ಸಂಸ್ಥಾಪಕ ಅರ್ನಾಬ್ ಗೋಸ್ವಾಮಿ ಅವರು ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ಅರ್ನಾಬ್ ವಿರುದ್ಧ ನೇಪಾಳಿ ಪತ್ರಕರ್ತ ವಾಗ್ದಾಳಿ ನಡೆಸಿದರು.
ಭಾರತದ ಮೂರು ಭೂ ಪ್ರದೇಶವನ್ನು ತನ್ನ ವ್ಯಾಪ್ತಿಗೆ ಸೇರಿಸಿ ಪರಿಷ್ಕೃತ ಭೂಪಟವನ್ನು ಜೂನ್ 18 ರಂದು ನೇಪಾಲ ಸಂಸತ್‌ನಲ್ಲಿ ಮಂಡನೆ ಮಾಡಿತ್ತು.